⚡ಟ್ರೆಂಡಿಂಗ್

ಯುವ ಶಕ್ತಿಯ ಸದ್ಬಳಕೆಗೆ ‘ಭಾರತ್ ಜೋಡೋ ಯುವ ಸಂಘ’ಗಳ ರಚನೆ

ಧಾರವಾಡ: ಜಿಲ್ಲೆಯ 16ರಿಂದ 35 ವರ್ಷದೊಳಗಿನ ಯುವಕರನ್ನು ಸಂಘಟಿಸಿ, ಅವರ ಶಕ್ತಿಯನ್ನು ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಸದ್ಬಳಕೆ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ 249 ‘ಭಾರತ್ ಜೋಡೋ ಯುವ ಸಂಘ’ಗಳನ್ನು ರಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಯುವ ಸಂಘಗಳ ಸ್ಥಾಪನೆಗೆ ಸಂಬಂಧಿಸಿದ ಮೆಂಟರ್ ಹಾಗೂ ಮಾರ್ಗದರ್ಶಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ದಾರಿ ತಪ್ಪದೆ ಉತ್ತಮ ಜೀವನ ರೂಪಿಸಿಕೊಳ್ಳಲು ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಯುವ ಸಂಘಗಳು ಪ್ರಮುಖ ವೇದಿಕೆಯಾಗಲಿವೆ ಎಂದರು.

ಪ್ರತಿ ಸಂಘದಲ್ಲಿ ಕನಿಷ್ಠ 100 ಯುವಕರನ್ನು ಸದಸ್ಯರನ್ನಾಗಿ ಸೇರಿಸಲಾಗುತ್ತಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲದೆ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಯೂ ಸಂಘಗಳನ್ನು ರಚಿಸಲಾಗುತ್ತಿದೆ. ಪ್ರತಿ ಸಂಘಕ್ಕೆ ಒಬ್ಬ ಮೆಂಟರ್ ಹಾಗೂ ಜಿಲ್ಲಾ ಮಟ್ಟದಲ್ಲಿ ಮಾಸ್ಟರ್ ಟ್ರೈನರ್‌ಗಳನ್ನು ಗುರುತಿಸಲಾಗಿದೆ. ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಸುಮಾರು 7,400 ಹಾಗೂ ನಗರ ಪ್ರದೇಶದಲ್ಲಿ ಸುಮಾರು 5,000 ಯುವಕರು ನೋಂದಣಿಯಾಗಿದ್ದು, ಒಟ್ಟು 25 ಸಾವಿರ ಯುವಕರ ನೋಂದಣಿ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

100 ಯುವಕರು ಸೇರ್ಪಡೆಯಾದ ಬಳಿಕ ಮೊದಲ ಸಭೆ ನಡೆಸಿ ತಾತ್ಕಾಲಿಕ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ನಂತರ ಸಂಘದ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ 15 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿಯಲ್ಲಿ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಮಾನದಂಡಗಳಿವೆ ಎಂದು ಹೇಳಿದರು.

ಯುವ ಸಂಘಗಳ ಮೂಲಕ ಕ್ರೀಡೆ, ಯೋಗ, ಆರೋಗ್ಯ ಶಿಬಿರ, ಸ್ವಚ್ಛತಾ ಅಭಿಯಾನ ಸೇರಿದಂತೆ ಹಲವು ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಗ್ರಾಮ ಹಾಗೂ ಸ್ಥಳೀಯ ಪ್ರದೇಶಗಳ ಸಮಸ್ಯೆಗಳಿಗೆ ಯುವಕರು ಒಗ್ಗೂಡಿ ಪರಿಹಾರ ಕಂಡುಕೊಳ್ಳುವಂತೆ ಮೆಂಟರ್‌ಗಳು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಅವರು ಸೂಚಿಸಿದರು.

ಪ್ರತಿ ಯುವ ಸಂಘಕ್ಕೆ ಸರ್ಕಾರದಿಂದ ವಾರ್ಷಿಕ ರೂ.10 ಲಕ್ಷ ಅನುದಾನ ನೀಡಲಾಗುತ್ತಿದ್ದು, ಇದರಲ್ಲಿ ರೂ.2 ಲಕ್ಷ ಬಂಡವಾಳ ವೆಚ್ಚಕ್ಕೆ ಹಾಗೂ ರೂ.8 ಲಕ್ಷ ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ವಯವೇ ಅನುದಾನವನ್ನು ಬಳಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹೇಳಿದರು.

ಯುವಕರ ಶಕ್ತಿಯನ್ನು ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುವ ಉದ್ದೇಶದಿಂದ ಜಾರಿಗೆ ಬಂದಿರುವ ಈ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ 13 ಸಾವಿರಕ್ಕೂ ಅಧಿಕ ಯುವಕರು ನೋಂದಣಿಯಾಗಿದ್ದು, ಸುಮಾರು 249 ಸಂಘಗಳ ರಚನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಯುವ ಸಂಘಗಳ ಮೂಲಕ ಕ್ರೀಡೆ, ಸಮುದಾಯ ಅಭಿವೃದ್ಧಿ, ಅರಣ್ಯ ಮತ್ತು ಪರಿಸರ ಸಂರಕ್ಷಣೆ, ಆರೋಗ್ಯ, ಸಂಸ್ಕೃತಿ, ಸಾಮಾಜಿಕ ಕೌಶಲ್ಯ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಅವಕಾಶವಿದೆ. ಸಂಘಗಳ ಚಟುವಟಿಕೆಗಳ ಯೋಜನೆ ಹಾಗೂ ಅನುಷ್ಠಾನದಲ್ಲಿ ಕಾರ್ಯಕಾರಿ ಸಮಿತಿ ಮತ್ತು ಮೆಂಟರ್‌ಗಳು ಪ್ರಮುಖ ಜವಾಬ್ದಾರಿ ವಹಿಸಬೇಕು ಎಂದು ಅವರು ಹೇಳಿದರು.

ಕಾರ್ಯಾಗಾರದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರೀಯಾ ಸಾಕ್ಯಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಮಹಾನಗರ ಪಾಲಿಕೆ ಆಡಳಿತದ ಉಪ ಆಯುಕ್ತೆ ಅನುರಾಧಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಹೆಚ್. ಅಮರಾಪೂರ ಸೇರಿದಂತೆ ಜಿಲ್ಲೆಯ 220ಕ್ಕೂ ಹೆಚ್ಚು ಮೆಂಟರ್‌ಗಳು, ಮಾರ್ಗದರ್ಶಕರು ಹಾಗೂ 12 ಮಾಸ್ಟರ್ ಟ್ರೈನರ್‌ಗಳು ಭಾಗವಹಿಸಿದ್ದರು.

ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಹಾಗೂ ಜಿಲ್ಲೆಯ ಮುಖ್ಯ ಮಾಸ್ಟರ್ ಟ್ರೇನರ್ ಹುಡೇದಮನಿ ಅವರು ಭಾರತ್ ಜೋಡೋ ಯುವ ಸಂಘಗಳ ರಚನೆ, ಉದ್ದೇಶ ಹಾಗೂ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಮಾರ್ಗದರ್ಶಕರಿಗೆ ಮಾಹಿತಿ ನೀಡಿದರು.

Post a Comment

أحدث أقدم
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...