ಅಳ್ನಾವರ: ಕಾಲೇಜಿಗೆ ತೆರಳದೆ ಉದ್ಯಾನವನದಲ್ಲಿ ಸಮಯ ಕಳೆಯುತ್ತಿದ್ದ ವಿದ್ಯಾರ್ಥಿಗಳಿಗೆ ಅಳ್ನಾವರ ಪೊಲೀಸ್ ಠಾಣೆಯ ಸಿಬ್ಬಂದಿ ಬುದ್ಧಿವಾದ ಹೇಳಿ, ಕಾಲೇಜಿಗೆ ತೆರಳುವಂತೆ ಕಳುಹಿಸಿದ ಘಟನೆ ಇಂದು ನಡೆದಿದೆ.
ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಸ್ಥಳೀಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ತಪಾಸಣೆ ನಡೆಸಿದರು. ಈ ವೇಳೆ ಕಾಲೇಜಿಗೆ ಗೈರುಹಾಜರಾಗಿ ಪಾರ್ಕ್‌ನಲ್ಲಿ ಕಾಲ ಕಳೆಯುತ್ತಿದ್ದ ಕೆಲ ವಿದ್ಯಾರ್ಥಿಗಳು ಪೊಲೀಸರ ಗಮನಕ್ಕೆ ಬಂದಿದ್ದಾರೆ.
ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ, ಸಮಯದ ಮೌಲ್ಯ ಹಾಗೂ ಭವಿಷ್ಯದ ಗುರಿಗಳ ಕುರಿತು ಪೊಲೀಸರು ತಿಳುವಳಿಕೆ ನೀಡಿದರು. ಬಳಿಕ ಪ್ರೀತಿಯಿಂದಲೇ ಬುದ್ಧಿವಾದ ಹೇಳಿ, ಕಾಲೇಜಿಗೆ ತೆರಳಿ ತರಗತಿಗಳಿಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಿಕೊಟ್ಟರು.
ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪೊಲೀಸರು ತೋರಿದ ಈ ಜಾಗರೂಕತೆ ಹಾಗೂ ಜವಾಬ್ದಾರಿಯುತ ನಡೆಗೆ ಸಾರ್ವಜನಿಕರು ಮತ್ತು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸರ ಇಂತಹ ಸಾಮಾಜಿಕ ಕಾಳಜಿಯ ಕಾರ್ಯಗಳು ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಜವಾಬ್ದಾರಿಯ ಮನೋಭಾವ ಬೆಳೆಸಲು ಸಹಕಾರಿಯಾಗಲಿವೆ.
إرسال تعليق