⚡ಟ್ರೆಂಡಿಂಗ್

ಕಲಕೇರಿಯಲ್ಲಿ ಜನಸಂಪರ್ಕ ಸಭೆ: ಗ್ರಾಮದಲ್ಲೇ ಉದ್ಯೋಗ, ಅಭಿವೃದ್ಧಿಗೆ ಆದ್ಯತೆ – ಸಚಿವ ಸಂತೋಷ ಲಾಡ್

ಧಾರವಾಡ, ಸೆ. 2: ವಿಬಿ-ಜಿ ರಾಮ್ ಜಿ ಯೋಜನೆಯಡಿ ಮಂಜೂರಾಗಿರುವ ಕಾಮಗಾರಿಗಳನ್ನು ಗ್ರಾಮದಲ್ಲಿಯೇ ಕೈಗೆತ್ತಿಕೊಂಡು, ಸ್ಥಳೀಯ ನಿವಾಸಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ ಎಸ್. ಲಾಡ್ ಹೇಳಿದರು.
ಧಾರವಾಡ ತಾಲೂಕಿನ ಕಲಕೇರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಜನಸಂಪರ್ಕ ಸಭೆ ಹಾಗೂ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಬಿ-ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿಗಳಿಗೆ ಅಧಿಕೃತ ಅನುಮೋದನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಕೆಲಸಕ್ಕಾಗಿ ಬೇರೆಡೆಗೆ ತೆರಳುವ ಅಗತ್ಯವಿಲ್ಲ. ಗ್ರಾಮದಲ್ಲಿಯೇ ನಿಯಮಿತವಾಗಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಸಚಿವರು ಭರವಸೆ ನೀಡಿದರು.
ಯುವಜನರ ಸಹಕಾರ ಅಗತ್ಯ
ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಯುವಜನತೆ, ಸಾರ್ವಜನಿಕರು ಹಾಗೂ ಗ್ರಾಮ ಮುಖಂಡರ ಸಹಕಾರ ಅತ್ಯಗತ್ಯ. ಸರ್ಕಾರ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಅವರ ಬಳಿಗೇ ಬಂದಿದ್ದು, ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಸಚಿವರು ಕರೆ ನೀಡಿದರು.
ಸಾರ್ವಜನಿಕರು ಸಲ್ಲಿಸಿರುವ ಪ್ರಮುಖ ಹಾಗೂ ತುರ್ತು ಮನವಿಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ, ನಿಗದಿತ ಅವಧಿಯಲ್ಲಿ ಹಂತ ಹಂತವಾಗಿ ಈಡೇರಿಸಲಾಗುವುದು. ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ನಡೆಯಲು ಸಾರ್ವಜನಿಕರ ಮೇಲ್ವಿಚಾರಣೆಯೂ ಅಗತ್ಯ ಎಂದು ಅವರು ಹೇಳಿದರು.
ದೇಶ ಮತ್ತು ರಾಜ್ಯ ಯಾವುದೇ ಒಂದು ರಾಜಕೀಯ ಪಕ್ಷದ ಗುತ್ತಿಗೆಯಲ್ಲ. ಜನಪ್ರತಿನಿಧಿಗಳು ಜನಸೇವಕರಾಗಿದ್ದು, ಎಲ್ಲ ಪಕ್ಷಗಳ ಮುಖಂಡರು ಹಾಗೂ ಗ್ರಾಮಸ್ಥರು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ಸಚಿವ ಸಂತೋಷ ಲಾಡ್ ಅಭಿಪ್ರಾಯಪಟ್ಟರು.
‘ಭಾರತ ಜೋಡೋ’ ಯುವ ಸಂಘಗಳಿಗೆ ಪ್ರೋತ್ಸಾಹ
ಗ್ರಾಮೀಣ ಯುವಕರನ್ನು ಸಂಘಟಿಸಿ, ಕ್ರೀಡೆ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಜಾಗೃತಿ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ‘ಭಾರತ ಜೋಡೋ’ ಕಾರ್ಯಕ್ರಮದಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯುವ ಸಂಘಗಳಿಗೆ ಷರತ್ತುಗಳಿಗೊಳಪಟ್ಟು ವರ್ಷಕ್ಕೆ ರೂ.10 ಲಕ್ಷದವರೆಗೆ ಪ್ರೋತ್ಸಾಹಧನ ನೀಡುವ ಯೋಜನೆ ಇದೆ. 16ರಿಂದ 35 ವರ್ಷದೊಳಗಿನ ಯುವಕರು ನೋಂದಣಿ ಮಾಡಿಕೊಂಡು ಯೋಜನೆಯ ಸೌಲಭ್ಯ ಪಡೆಯಬೇಕು ಎಂದು ಸಚಿವರು ತಿಳಿಸಿದರು.
ಮೂಲಸೌಕರ್ಯ ಅಭಿವೃದ್ಧಿಗೆ ಸೂಚನೆ
ಸಭೆಯಲ್ಲಿ ಗ್ರಾಮಸ್ಥರ ಬೇಡಿಕೆಗಳನ್ನು ಆಲಿಸಿದ ಸಚಿವರು ಸ್ಮಶಾನಗಳ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣ ಹಾಗೂ ಹಾಳಾದ ಗ್ರಾಮೀಣ ರಸ್ತೆಗಳನ್ನು ತಕ್ಷಣ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಂಗವಿಕಲರಿಗೆ ಸ್ವಯಂ ಉದ್ಯೋಗಕ್ಕಾಗಿ ಅಂಗಡಿ ಸೌಲಭ್ಯ ಹಾಗೂ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಆರ್ಥಿಕ ನೆರವು ಒದಗಿಸುವ ಕ್ರಮ ಕೈಗೊಳ್ಳಲಾಯಿತು.
ಶಾಲಾ ಶೌಚಾಲಯಗಳ ನಿರ್ಮಾಣ, ಮಾದರಿ ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳ ಅನುದಾನ ಹಾಗೂ ಕಲಕೇರಿ ಗ್ರಾಮದಲ್ಲಿ ನೂತನ ಕಾಲೇಜು ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಇದಲ್ಲದೆ, ಕಲಕೇರಿಯಲ್ಲಿ ಹೊಸ ಬ್ಯಾಂಕ್ ಶಾಖೆ ಹಾಗೂ ಪಶುಸಂಗೋಪನಾ ಆಸ್ಪತ್ರೆ ಸ್ಥಾಪಿಸುವಂತೆ ಗ್ರಾಮಸ್ಥರು ಸಲ್ಲಿಸಿದ ಮನವಿಗಳನ್ನು ಸ್ವೀಕರಿಸಿ, ಪರಿಶೀಲನೆ ನಡೆಸಿದರು.
ಬರಪೀಡಿತ ತಾಲೂಕುಗಳ ಕುರಿತು ಮಾಹಿತಿ
ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ರಾಜ್ಯದ 101 ತಾಲೂಕುಗಳನ್ನು ಮೊದಲ ಹಂತದಲ್ಲಿ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಮುಂದಿನ ಹಂತಗಳಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿ ಅರ್ಹವಾಗಿರುವ ಇತರ ತಾಲೂಕುಗಳನ್ನೂ ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಲಾಗುವುದು ಎಂದು ಸಚಿವರು ಹೇಳಿದರು.
ಸರ್ಕಾರ ಜಾರಿಗೆ ತರುವ ಅಭಿವೃದ್ಧಿ ಯೋಜನೆಗಳು ಸಾರ್ವಜನಿಕರ ಹಿತಕ್ಕಾಗಿ ರೂಪಿಸಲಾಗಿದ್ದು, ಸರ್ಕಾರಿ ಆಸ್ತಿಗಳ ರಕ್ಷಣೆ ಹಾಗೂ ಸೂಕ್ತ ನಿರ್ವಹಣೆ ಅಧಿಕಾರಿಗಳಷ್ಟೇ ಅಲ್ಲದೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮದ ಹಿರಿಯರು, ಮುಖಂಡರು, ಯುವಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Post a Comment

أحدث أقدم
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...