ಹುಬ್ಬಳ್ಳಿ: ವಲಯ ಕಚೇರಿ-12ರ ವ್ಯಾಪ್ತಿಯ ಪಿ.ಬಿ. ರಸ್ತೆಯ ಕೆಎಂಎಫ್ ಸಮೀಪ ಸಾರ್ವಜನಿಕ ರಸ್ತೆಯಲ್ಲೇ ಅಕ್ರಮವಾಗಿ ಕಟ್ಟಡ ತ್ಯಾಜ್ಯ ಸುರಿಯುತ್ತಿದ್ದ ವ್ಯಕ್ತಿಗಳನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಪತ್ತೆಹಚ್ಚಿ, ಸ್ಥಳದಲ್ಲೇ ₹5,000 ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಹಿರಿಯ ಆರೋಗ್ಯ ನಿರೀಕ್ಷಕರಾದ ಸಿದ್ದಾರ್ಥ್ ನಡೋಣಿ ಹಾಗೂ ಆರೋಗ್ಯ ನಿರೀಕ್ಷಕರಾದ ಪೂಜಾ ಇಚ್ಚಂಗಿ ಮತ್ತು ನೀಲಮ್ಮ ಅಂಗಡಿ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿತು.
ಈ ಕುರಿತು ಪಾಲಿಕೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ರಸ್ತೆ, ಸಾರ್ವಜನಿಕ ಸ್ಥಳ ಹಾಗೂ ಖಾಲಿ ಜಾಗಗಳಲ್ಲಿ ಕಸ ಅಥವಾ ಕಟ್ಟಡ ತ್ಯಾಜ್ಯಗಳನ್ನು ಸುರಿಯುವುದು ದಂಡನೀಯ ಅಪರಾಧವಾಗಿದೆ. ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಮುಂದಿನ ದಿನಗಳಲ್ಲಿಯೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ನಗರವನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರವಾಗಿಡಲು ಸಾರ್ವಜನಿಕರು ಪಾಲಿಕೆಯೊಂದಿಗೆ ಕೈಜೋಡಿಸಿ, ಕಸ ಹಾಗೂ ಕಟ್ಟಡ ತ್ಯಾಜ್ಯವನ್ನು ನಿಗದಿತ ಸ್ಥಳಗಳಲ್ಲೇ ವಿಲೇವಾರಿ ಮಾಡುವಂತೆ ಪಾಲಿಕೆ ಮನವಿ ಮಾಡಿದೆ.
Post a Comment