⚡ಟ್ರೆಂಡಿಂಗ್

ಶಿವಳ್ಳಿಯಲ್ಲಿ ಕಸ ಸಂಸ್ಕರಣಾ ಘಟಕಕ್ಕೆ ತೀವ್ರ ವಿರೋಧ: ಕಾಮಗಾರಿ ಸ್ಥಳದಲ್ಲೇ ಗ್ರಾಮಸ್ಥರ ಧರಣಿ


ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮದ ಸಮೀಪದ ಮಡ್ಡಿಗುಡ್ಡದಲ್ಲಿ ಮಹಾನಗರ ಪಾಲಿಕೆ ನಿರ್ಮಿಸಲು ಉದ್ದೇಶಿಸಿರುವ ಕಸ ಸಂಸ್ಕರಣಾ ಹಾಗೂ ವಿಲೇವಾರಿ ಘಟಕಕ್ಕೆ ಸ್ಥಳೀಯ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಯೋಜನೆಯನ್ನು ತಕ್ಷಣವೇ ಕೈಬಿಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲೇ ಜಮಾಯಿಸಿ ಧರಣಿ ನಡೆಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು, ಗ್ರಾಮಸ್ಥರ ಅಭಿಪ್ರಾಯವನ್ನು ಪರಿಗಣಿಸದೆ ಮಹಾನಗರ ಪಾಲಿಕೆ ಯೋಜನೆಯನ್ನು ಮುಂದುವರಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರ ಪ್ರಕಾರ, ಕಸ ಸಂಸ್ಕರಣಾ ಘಟಕ ಸ್ಥಾಪನೆಯಾದರೆ ಗ್ರಾಮದಲ್ಲಿ ದುರ್ವಾಸನೆ ಹರಡಿ, ಸೊಳ್ಳೆ ಹಾಗೂ ನೊಣಗಳ ಕಾಟ ಹೆಚ್ಚಾಗುವ ಸಾಧ್ಯತೆಯಿದ್ದು, ಮಕ್ಕಳು, ವೃದ್ಧರು ಸೇರಿದಂತೆ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು. ಅಲ್ಲದೆ, ಘಟಕದಿಂದ ಹೊರಬರುವ ತ್ಯಾಜ್ಯ ನೀರು ಭೂಮಿಯೊಳಗೆ ಸೇರಿ ಅಂತರ್ಜಲ ಹಾಗೂ ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳುವ ಭೀತಿ ಇದೆ ಎಂದು ತಿಳಿಸಿದರು.

ಯೋಜನೆಯನ್ನು ಸಾರ್ವಜನಿಕರ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ಕೂಡಲೇ ಕೈಬಿಡಬೇಕು. ಒಂದು ವೇಳೆ ಕಾಮಗಾರಿಯನ್ನು ಮುಂದುವರಿಸಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಮಹಾನಗರ ಪಾಲಿಕೆಗೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಗ್ರಾಮದ ಪ್ರಮುಖರಾದ ಶಿವು ಬೆಳಾರದ, ರಾಜು ಮುದ್ದಿ, ಜಯಣ್ಣ ಮುದ್ದಿ, ಮೇಮಣ್ಣ ಮುಗದ, ಪರಮೇಶ್ವರ ಧಾರವಾಡ, ಮುತ್ತು ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿ ಘಟಕದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...