⚡ಟ್ರೆಂಡಿಂಗ್

ನವಲಗುಂದವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ: ತಹಶೀಲ್ದಾರರಿಗೆ ಬಿಜೆಪಿ ಮನವಿ

ನವಲಗುಂದ, ಜು. 9: ಮಳೆಯ ಕೊರತೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ನವಲಗುಂದ ವಿಧಾನಸಭಾ ಕ್ಷೇತ್ರವನ್ನು ತಕ್ಷಣವೇ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ನವಲಗುಂದ ಮಂಡಲದ ವತಿಯಿಂದ ತಹಶೀಲ್ದಾರ ಸುಧೀರ ಸಾಹುಕಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ನಿರಂತರ ಮಳೆ ಅಭಾವದಿಂದ ರೈತರು ಬೆಳೆ ನಷ್ಟದ ಭೀತಿಯಲ್ಲಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಕುಂಠಿತಗೊಂಡಿವೆ. ಹೀಗಾಗಿ ಸರ್ಕಾರ ಕೂಡಲೇ ನವಲಗುಂದ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಲಾಗಿದೆ.

ಇದೇ ವೇಳೆ, 2025-26ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರವನ್ನು ವಿಳಂಬ ಮಾಡದೆ ರೈತರ ಖಾತೆಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಅಲ್ಲದೆ, ಬೆಳೆ ವಿಮೆ ಪ್ರೀಮಿಯಂ ಅನ್ನು ಬ್ಯಾಂಕ್‌ನಲ್ಲಿ ಪಾವತಿಸಬೇಕೋ ಅಥವಾ ಆನ್‌ಲೈನ್ ಕೇಂದ್ರಗಳ ಮೂಲಕ ಸಲ್ಲಿಸಬೇಕೋ ಎಂಬ ಗೊಂದಲದಿಂದ ರೈತರು ಸಂಕಷ್ಟಕ್ಕೀಡಾಗಿದ್ದು, ಸರ್ಕಾರ ತಕ್ಷಣ ಸ್ಪಷ್ಟ ಮಾರ್ಗಸೂಚಿ ಪ್ರಕಟಿಸಿ ಗೊಂದಲ ನಿವಾರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರಸ್ತುತ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳು ಉಂಟಾಗದಂತೆ ಪಾರದರ್ಶಕವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡರು ಮನವಿ ಮಾಡಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ನವಲಗುಂದ ಮಂಡಳ ಅಧ್ಯಕ್ಷ ಗಂಗಪ್ಪ ಮನಮಿ, ದೇವರಾಜ ದಾಡಿಭಾವಿ, ಷಣ್ಮುಖ ಗುರಿಕಾರ, ಅಂದಾನಯ್ಯ ಹಿರೇಮಠ, ಮಲ್ಲಿಕಾರ್ಜುನ ಸಂಗನಗೌಡ್ರ, ಸಿದ್ದನಗೌಡ ಪಾಟೀಲ, ನಾಗಪ್ಪ ಹರ್ತಿ, ಸಿದ್ದಣ್ಣ ಕಿಟಗೇರಿ ಸೇರಿದಂತೆ ನೂರಾರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...