ಹುಬ್ಬಳ್ಳಿ, ಜೂನ್ 28: ಗ್ರಾಮೀಣ ಹಾಗೂ ನಗರದ ದೂರದ ಪ್ರದೇಶಗಳ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಮನೆಬಾಗಿಲಿಗೆ ತಲುಪಿಸುವ ಮಹತ್ವದ ಉದ್ದೇಶದೊಂದಿಗೆ "Health on Wheels – ಸಂಚಾರಿ ಆರೋಗ್ಯ ಸೇವೆ" (ಮೊಬೈಲ್ ಡಯಾಗ್ನೋಸ್ಟಿಕ್ ವ್ಯಾನ್)ಗೆ ಇಂದು ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಯಿತು.
ಹುಬ್ಬಳ್ಳಿಯ ಕರ್ನಾಟಕ ಜಿಮಖಾನಾ ಆವರಣದಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವಿದ್ಯಾನಗರ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಹಾಗೂ ಎನ್‌ಎಂಆರ್ ಫೌಂಡೇಶನ್ ಅವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಪ್ರಲ್ಹಾದ್ ಜೋಶಿ ಅವರು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಸಂಚಾರಿ ಆರೋಗ್ಯ ಸೇವಾ ವಾಹನವನ್ನು ಉದ್ಘಾಟಿಸಿದರು.
ಈ ಮೊಬೈಲ್ ಡಯಾಗ್ನೋಸ್ಟಿಕ್ ವ್ಯಾನ್ ಮೂಲಕ ಗ್ರಾಮೀಣ ಪ್ರದೇಶಗಳು ಹಾಗೂ ಆರೋಗ್ಯ ಸೌಲಭ್ಯಗಳಿಂದ ದೂರವಿರುವ ಜನರಿಗೆ ವಿವಿಧ ವೈದ್ಯಕೀಯ ತಪಾಸಣೆ, ಪ್ರಾಥಮಿಕ ಆರೋಗ್ಯ ಸೇವೆ ಮತ್ತು ಅಗತ್ಯ ಸಲಹೆಗಳನ್ನು ಅವರ ಮನೆಬಾಗಿಲಿಗೇ ತಲುಪಿಸಲಾಗುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಹೆಜ್ಜೆಯಾಗಿದೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಲಿಂಗರಾಜ್ ಪಾಟೀಲ್, ರೋಟರಿ ಜಿಲ್ಲಾ ಗವರ್ನರ್ ಅರುಣ್ ಭಂಡಾರೆ, ರೋಟರಿ ಸಂಸ್ಥೆಯ ಪ್ರಮುಖರಾದ ಪಿ.ಡಿ.ಜಿ. ಗಣೇಶ್ ಭಟ್, ಕೌಸ್ತುಭಾ ಸೌಶಿಖರ್, ಮಡಿವಾಳಪ್ಪ ಜುಂಜುನವರ್, ಡಾ. ಮಹಿಮ ದಾಂಡ್, ಡೌಗ್ಲಾಸ್ ಬ್ರೌನ್, ಡಾ. ಎನ್.ಎ. ಚರಂತಿಮಠ, ದೀಪ್ ದೇಸಾಯಿ ಸೇರಿದಂತೆ ರೋಟರಿ ಸಂಸ್ಥೆಯ ಅನೇಕ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸಮಾಜಮುಖಿ ಆರೋಗ್ಯ ಸೇವೆಯನ್ನು ಮತ್ತಷ್ಟು ಜನರಿಗೆ ತಲುಪಿಸುವ ಈ ಮಹತ್ವದ ಯೋಜನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Post a Comment