ಮೈಸೂರು, ಜೂನ್ 28: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಹೋರಾಟಕ್ಕೆ ಸಜ್ಜಾಗಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಕರೆ ನೀಡಿದರು.
ಮೈಸೂರಿನ ಜೆ.ಕೆ. ಮೈದಾನದಲ್ಲಿ ನಡೆದ 'ಮೈಸೂರು ವಿಭಾಗ ಮಟ್ಟದ ಎಸ್‌ಐಆರ್ ಜಾಗೃತಿ ಸಮಾವೇಶ' ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಿಸಲು ಈ ಹೋರಾಟವನ್ನು "ಎರಡನೇ ಸ್ವಾತಂತ್ರ್ಯ ಸಂಗ್ರಾಮ"ದಂತೆ ಪರಿಗಣಿಸುವ ಅಗತ್ಯವಿದೆ ಎಂದು ಹೇಳಿದರು.
ಮತದಾನದ ಹಕ್ಕಿನ ಮಹತ್ವವನ್ನು ಒತ್ತಿ ಹೇಳಿದ ಹರಿಪ್ರಸಾದ್, "ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಅತ್ಯಂತ ಪ್ರಬಲ ಅಸ್ತ್ರ. ಪ್ರತಿಯೊಬ್ಬ ನಾಗರಿಕನ ಕೈಯಲ್ಲಿರುವ ಮತವೇ ಪ್ರಜಾಪ್ರಭುತ್ವದ ಶಕ್ತಿ. ಮತದಾರರು ಎಚ್ಚರವಾಗದಿದ್ದರೆ ದೇಶ ಮತ್ತೆ ಗುಲಾಮಗಿರಿಯತ್ತ ಸಾಗುವ ಅಪಾಯವಿದೆ" ಎಂದು ಎಚ್ಚರಿಕೆ ನೀಡಿದರು.
ಎಸ್‌ಐಆರ್ ಪ್ರಕ್ರಿಯೆಯನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್ ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಆರೋಪಿಸಿದ ಅವರು, ನಿರ್ದಿಷ್ಟ ಜಾತಿ ಮತ್ತು ವರ್ಗಗಳಿಗೆ ಸೇರಿದ ಅರ್ಹ ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
"ಕಾಂಗ್ರೆಸ್ ಪಕ್ಷವು ಮತದಾರರ ಪಟ್ಟಿ ಪರಿಷ್ಕರಣೆಗೆ ವಿರೋಧಿಯಲ್ಲ. ಮೃತಪಟ್ಟವರು ಅಥವಾ ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಉದ್ದೇಶಪೂರ್ವಕವಾಗಿ ಅರ್ಹ ಮತದಾರರನ್ನು ಗುರಿಯಾಗಿಸಿ ಪಟ್ಟಿಯಿಂದ ಕೈಬಿಡುವುದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ" ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯ ಹಾಗೂ ಕೇಂದ್ರದ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಹರಿಪ್ರಸಾದ್, ಬಿಜೆಪಿ ಧರ್ಮ ಆಧಾರಿತ ರಾಜಕೀಯವನ್ನು ಮಾತ್ರ ನಂಬುತ್ತದೆ ಎಂದು ಆರೋಪಿಸಿದರು. ಸಂವಿಧಾನ, ರಾಷ್ಟ್ರಧ್ವಜ ಹಾಗೂ ಜಾತ್ಯತೀತ ಮೌಲ್ಯಗಳ ಬಗ್ಗೆ ಬಿಜೆಪಿ ಗೌರವ ಹೊಂದಿಲ್ಲ ಎಂದು ಟೀಕಿಸಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರ ಹೆಸರು ಕೈಬಿಡದಂತೆ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ಮಟ್ಟದಲ್ಲಿಯೇ ಜಾಗೃತಿ ಮೂಡಿಸಿ, ಮತದಾರರ ಹಕ್ಕುಗಳನ್ನು ರಕ್ಷಿಸಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
Post a Comment