⚡ಟ್ರೆಂಡಿಂಗ್

ಕಾಂಗ್ರೆಸ್ ಕಡಿಮೆ ಅಂತರದಲ್ಲಿ ಗೆದ್ದ ಕ್ಷೇತ್ರಗಳಲ್ಲಿ ಮತ ಕಿತ್ತುಹಾಕಿದರೆ ಕಷ್ಟ: SIR ಬಗ್ಗೆ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ


ಮೈಸೂರು, ಜೂನ್ 28: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR/SSR) ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ನಡೆದ ಎಸ್‌ಐಆರ್ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ವಿರೋಧ ಪಕ್ಷಗಳ ಬೆಂಬಲಿಗರ ಮತಗಳನ್ನು ವ್ಯವಸ್ಥಿತವಾಗಿ ತೆಗೆದುಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

"1950ರಿಂದ ಚುನಾವಣಾ ಆಯೋಗ ಮತದಾರರ ಪಟ್ಟಿಯನ್ನು ಪರಿಷ್ಕರಿಸುತ್ತಲೇ ಬಂದಿದೆ. ಆದರೆ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಅಧಿಕಾರ ಯಾರಿಗೂ ಇಲ್ಲ. ಚುನಾವಣಾ ಆಯೋಗವು ಸಂಪೂರ್ಣವಾಗಿ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಬೇಕು," ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿರುವ ಕ್ಷೇತ್ರಗಳಲ್ಲಿ ಕೆಲವೇ ಸಾವಿರ ಮತಗಳನ್ನು ತೆಗೆದುಹಾಕಿದರೂ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀಳಬಹುದು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

"ರಾಜ್ಯದಲ್ಲಿ ಹಲವಾರು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಕೇವಲ 1,000 ರಿಂದ 5,000 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಅಂತಹ ಕ್ಷೇತ್ರಗಳಲ್ಲಿ 4-5 ಸಾವಿರ ಮತಗಳನ್ನು ವ್ಯವಸ್ಥಿತವಾಗಿ ಕೈಬಿಟ್ಟರೆ ಗೆಲುವು ಕಷ್ಟವಾಗಬಹುದು. ಬಡವರು, ರೈತರು, ಕಾರ್ಮಿಕರು ಹಾಗೂ ಅಲ್ಪಸಂಖ್ಯಾತರ ಮತಗಳೇ ಬಿಜೆಪಿಯ ಪ್ರಮುಖ ಗುರಿಯಾಗಿವೆ," ಎಂದು ಅವರು ಆರೋಪಿಸಿದರು.

ಬಿಜೆಪಿಯ ರಾಷ್ಟ್ರೀಯ ಮತಶೇಕಡಾವಾರಿನ ಕುರಿತು ಉಲ್ಲೇಖಿಸಿದ ಸಿದ್ದರಾಮಯ್ಯ, "ದೇಶದಲ್ಲಿ ಬಿಜೆಪಿ ಸುಮಾರು 36 ಶೇಕಡಾ ಮತಗಳನ್ನು ಮಾತ್ರ ಪಡೆದಿದೆ. ಉಳಿದ 64 ಶೇಕಡಾ ಜನರು ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದಾರೆ. ಆ ಮತಗಳಲ್ಲಿ ಸ್ವಲ್ಪ ಪ್ರಮಾಣದ ಮತಗಳನ್ನು ಪಟ್ಟಿಯಿಂದ ಕೈಬಿಟ್ಟರೂ ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ ಎದುರಾಗಬಹುದು," ಎಂದು ಹೇಳಿದರು.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದಿದ್ದರೆ, 2024ರಲ್ಲಿ ಅದು 240 ಸ್ಥಾನಗಳಿಗೆ ಇಳಿದಿದೆ. ಬೆಲೆ ಏರಿಕೆ, ನಿರುದ್ಯೋಗ ಹಾಗೂ ಜನವಿರೋಧಿ ಆಡಳಿತದಿಂದ ಈ ಹಿನ್ನಡೆ ಉಂಟಾಗಿದೆ. ಇದೀಗ ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಅದನ್ನು ಸರಿಪಡಿಸುವ ಸಂಚು ರೂಪಿಸಲಾಗಿದೆ ಎಂದು ಸಿಎಂ ಆರೋಪಿಸಿದರು.

ಜೂನ್ 30ರಿಂದ ಜುಲೈ 29ರವರೆಗೆ ನಡೆಯುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ತೀವ್ರ ನಿಗಾ ವಹಿಸಿ, ಯಾವುದೇ ಅರ್ಹ ಮತದಾರರ ಹೆಸರು ಕೈಬಿಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...