⚡ಟ್ರೆಂಡಿಂಗ್

ರಾಜ್ಯದ 10 ನಗರಗಳಿಗೆ ಇಲೆಕ್ಟ್ರಿಕ್ ಬಸ್ ಭಾಗ್ಯ; ₹2,583 ಕೋಟಿ ಯೋಜನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

ರಾಜ್ಯದ 10 ನಗರಗಳಿಗೆ ಇಲೆಕ್ಟ್ರಿಕ್ ಬಸ್ ಭಾಗ್ಯ; ₹2,583 ಕೋಟಿ ಯೋಜನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

ಬೆಂಗಳೂರು, ಜೂ.27: ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಆಧುನೀಕರಿಸುವ ಮಹತ್ವದ ಹೆಜ್ಜೆಯಾಗಿ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ PM e-Bus Sewa ಯೋಜನೆಯಡಿ ₹2,583 ಕೋಟಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆಯಡಿ ರಾಜ್ಯದ 10 ಪ್ರಮುಖ ನಗರಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಯೋಜನೆಯ ವ್ಯಾಪ್ತಿಯಲ್ಲಿ ಮಂಗಳೂರು, ಮೈಸೂರು, ದಾವಣಗೆರೆ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ವಿಜಯಪುರ ಹಾಗೂ ಬಳ್ಳಾರಿ ನಗರಗಳು ಸೇರಿವೆ. ಈ ನಗರಗಳಲ್ಲಿ ಆಧುನಿಕ ಇ-ಬಸ್ ಡಿಪೋಗಳು, ವೇಗದ ಚಾರ್ಜಿಂಗ್ ಸ್ಟೇಷನ್‌ಗಳು ಹಾಗೂ ಅಗತ್ಯ ವಿದ್ಯುತ್ ಸಂಪರ್ಕ ವ್ಯವಸ್ಥೆಗಳನ್ನು ನಿರ್ಮಿಸಲಾಗುವುದು.

ನಗರಗಳ ಜನಸಂಖ್ಯೆಯನ್ನು ಆಧರಿಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಹಂಚಿಕೆ ಮಾಡಲಾಗುತ್ತದೆ. 20 ರಿಂದ 40 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಿಗೆ 150 ಬಸ್‌ಗಳು, 10 ರಿಂದ 20 ಲಕ್ಷ ಜನಸಂಖ್ಯೆಯ ನಗರಗಳಿಗೆ 100 ಬಸ್‌ಗಳು ಹಾಗೂ 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಿಗೆ 50 ಬಸ್‌ಗಳನ್ನು ಒದಗಿಸುವ ಯೋಜನೆ ರೂಪಿಸಲಾಗಿದೆ.

ಮಂಗಳೂರು, ಮೈಸೂರು, ದಾವಣಗೆರೆ, ತುಮಕೂರು ಹಾಗೂ ಶಿವಮೊಗ್ಗ ನಗರಗಳ ಯೋಜನೆಯ ಜವಾಬ್ದಾರಿಯನ್ನು ಕೆಎಸ್‌ಆರ್‌ಟಿಸಿ (KSRTC) ವಹಿಸಿಕೊಳ್ಳಲಿದ್ದು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ವಿಜಯಪುರ ಹಾಗೂ ಬಳ್ಳಾರಿ ನಗರಗಳ ಕಾರ್ಯಾಚರಣೆಯನ್ನು ಎನ್‌ಡಬ್ಲ್ಯೂಕೆಆರ್‌ಟಿಸಿ (NWKRTC) ಮತ್ತು ಕೆಕೆಆರ್‌ಟಿಸಿ (KKRTC) ಸಂಸ್ಥೆಗಳು ನಿರ್ವಹಿಸಲಿವೆ.

ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳ ಬಳಕೆಯಿಂದ ನಗರಗಳಲ್ಲಿ ವಾಯು ಹಾಗೂ ಶಬ್ದ ಮಾಲಿನ್ಯ ಕಡಿಮೆಯಾಗುವುದರ ಜೊತೆಗೆ ಇಂಧನ ವೆಚ್ಚದಲ್ಲಿ ಉಳಿತಾಯವಾಗಲಿದ್ದು, ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿತಿಯೂ ಸುಧಾರಿಸುವ ನಿರೀಕ್ಷೆಯಿದೆ. ಸಾರ್ವಜನಿಕರಿಗೆ ಗುಣಮಟ್ಟದ, ಸುರಕ್ಷಿತ ಹಾಗೂ ಪರಿಸರ ಸ್ನೇಹಿ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಮೈಲಿಗಲ್ಲಾಗಲಿದೆ.

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...