ಹುಬ್ಬಳ್ಳಿ, ಜೂ.27: ಸರ್ಕಾರಿ ಪ್ರೌಢಶಾಲೆಗಳ 9 ಮತ್ತು 10ನೇ ತರಗತಿಗಳಿಗೆ ಬೋಧನೆಗಾಗಿ ಪದವಿ ಪೂರ್ವ (ಪಿಯು) ಕಾಲೇಜುಗಳ ಉಪನ್ಯಾಸಕರನ್ನು ನಿಯೋಜಿಸುವ ಸರ್ಕಾರದ ಪ್ರಸ್ತಾವನೆಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಕರಡು ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಪಿಯು ಹಂತವು ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಮತ್ತು ವೃತ್ತಿಜೀವನದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಈ ಹಂತದಲ್ಲಿ ಗುಣಮಟ್ಟದ ಬೋಧನೆ ಅತ್ಯಗತ್ಯ ಎಂದು ಅವರು ತಿಳಿಸಿದ್ದಾರೆ.
ಪಿಯು ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ನಿಯೋಜಿಸಿದರೆ, ಪಿಯು ವಿದ್ಯಾರ್ಥಿಗಳಿಗೆ ದೊರೆಯುವ ಬೋಧನೆಯ ಗುಣಮಟ್ಟ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ಹೆಚ್ಚುವರಿ ತರಗತಿಗಳನ್ನು ನೀಡಲು ಉಪನ್ಯಾಸಕರಿಗೆ ಸಮಯದ ಕೊರತೆ ಉಂಟಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣದ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು, ಪಿಯು ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ನಿಯೋಜಿಸುವ ಕುರಿತ ಸರ್ಕಾರದ ಕರಡು ಅಧಿಸೂಚನೆಯನ್ನು ತಕ್ಷಣವೇ ಕೈಬಿಡಬೇಕು ಎಂದು ಬಸವರಾಜ ಹೊರಟ್ಟಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Post a Comment