ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂಗನವಾಡಿ ಶಿಕ್ಷಕಿ ಹಾಗೂ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ರತ್ನಮ್ಮ ಬಳಿಗಾರ (43) ಅವರು ಹೃದಯಾಘಾತದಿಂದ ಮೃತಪಟ್ಟಿರುವ ದುಃಖದ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ರತ್ನಮ್ಮ ಬಳಿಗಾರ ಅವರು ಗ್ರಾಮದಲ್ಲಿ ಎಸ್‌ಐಆರ್ (Special Intensive Revision) ಕಾರ್ಯದಲ್ಲಿ ಬಿಎಲ್ಒ ಆಗಿ ಸಕ್ರಿಯವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ವೇಳೆ ಪ್ರಗತಿ ಪರಿಶೀಲನೆಗಾಗಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರು ಬಾಗೇವಾಡಿಗೆ ಭೇಟಿ ನೀಡಿದ್ದರು.
ಸಭೆಯಲ್ಲಿ ರತ್ನಮ್ಮ ಅವರ ಕಾರ್ಯನಿಷ್ಠೆಯನ್ನು ಶಾಸಕ ಡಾ. ಚಂದ್ರು ಲಮಾಣಿ ಅವರು ಶ್ಲಾಘಿಸಿದ್ದರು. ಸಭೆ ಮುಗಿದ ಬಳಿಕ ಚಹಾ ಸೇವಿಸುತ್ತಿದ್ದ ಸಂದರ್ಭದಲ್ಲಿ ರತ್ನಮ್ಮ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕರ್ತವ್ಯದಲ್ಲಿದ್ದಾಗಲೇ ಪ್ರಾಮಾಣಿಕ ಅಧಿಕಾರಿಯೊಬ್ಬರು ಹಠಾತ್ ನಿಧನ ಹೊಂದಿರುವುದು ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ. ಅವರ ಅಗಲಿಕೆಗೆ ಗ್ರಾಮಸ್ಥರು, ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಕಂಬನಿ ಮಿಡಿದಿದ್ದು, ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
إرسال تعليق