ನವಲಗುಂದ, ಜು. 20: ನವಲಗುಂದದ ಪ್ರಸಿದ್ಧ ಪವಾಡ ಪುರುಷ ಅಜಾತ ನಾಗಲಿಂಗ ಸ್ವಾಮೀಜಿಯವರ 145ನೇ ಆರಾಧನಾ ಮಹೋತ್ಸವದ ಅಂಗವಾಗಿ ಭಾನುವಾರ ನಡೆದ ಪಲ್ಲಕ್ಕಿ ಉತ್ಸವವು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದ ವಾತಾವರಣದಲ್ಲಿ ಅದ್ಧೂರಿಯಾಗಿ ನೆರವೇರಿತು. ನೂರಾರು ಭಕ್ತರು ಭಾಗವಹಿಸಿ ನಾಗಲಿಂಗ ಸ್ವಾಮೀಜಿಯವರ ಜಯಘೋಷದೊಂದಿಗೆ ಪಲ್ಲಕ್ಕಿ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಉತ್ಸವಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ ಅವರು ಚಾಲನೆ ನೀಡಿ ಮಾತನಾಡಿ, "ಉತ್ತರ ಕರ್ನಾಟಕದ ಆರಾಧ್ಯ ದೈವ ನಾಗಲಿಂಗಜ್ಜನ ಪವಾಡಗಳು ಇತಿಹಾಸ ಪ್ರಸಿದ್ಧ. ಬಾಲ್ಯದಿಂದಲೂ ನಾನು ಈ ಜಾತ್ರೆಯಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ. ಇಂದು ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡುವ ಅವಕಾಶ ದೊರೆತಿರುವುದು ದೇವರ ಕೃಪೆ," ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡರು.
ಇದಕ್ಕೂ ಮೊದಲು ಮಠದಲ್ಲಿ ನಾಗಲಿಂಗ ಸ್ವಾಮೀಜಿಯವರ ಗದ್ದುಗೆಗೆ ವಿಶೇಷ ರುದ್ರಾಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ನೆರವೇರಿದವು. ಬಳಿಕ ಆರಂಭವಾದ ಪಲ್ಲಕ್ಕಿ ಮೆರವಣಿಗೆಯು ಸಾಂಪ್ರದಾಯಿಕವಾಗಿ ಗಣೇಶಗುಡಿ ಕ್ರಾಸ್, ಗಾಂಧಿ ಮಾರುಕಟ್ಟೆ ಮಾರ್ಗವಾಗಿ ಸಾಗಿದ್ದು, ಗ್ರಾಮದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮರಳಿ ಮಠಕ್ಕೆ ತಲುಪಿತು. ಮೆರವಣಿಗೆಯುದ್ದಕ್ಕೂ ಭಕ್ತರು ಭಜನೆ, ಜಯಘೋಷ ಹಾಗೂ ಧಾರ್ಮಿಕ ಘೋಷಣೆಗಳ ಮೂಲಕ ಭಕ್ತಿಭಾವ ಮೆರೆದರು.
ಆರಾಧನಾ ಮಹೋತ್ಸವದ ಅಂಗವಾಗಿ ಖ್ಯಾತ ಕಲಾವಿದರಾದ ಡಾ. ನಾರಾಯಣ ಹಿರೇಕೊಳಚಿ ಹಾಗೂ ಸುಮಿತ್ರಾ ಕಾಡದೇವರಮಠ ಸೇರಿದಂತೆ ಹಲವು ಕಲಾವಿದರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಭಕ್ತರು ಸಂಗೀತ ಸೇವೆಯನ್ನು ಆಸ್ವಾದಿಸಿ ಆಧ್ಯಾತ್ಮಿಕ ವಾತಾವರಣದಲ್ಲಿ ತಲ್ಲೀನರಾದರು.
ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಮಠದ ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಭಕ್ತಾದಿಗಳು ಪಾಲ್ಗೊಂಡು ನಾಗಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು.
إرسال تعليق