ಹುಬ್ಬಳ್ಳಿಯ ವೈದ್ಯರ ಅದ್ಭುತ ಸಾಧನೆ: 101 ವರ್ಷದ ಶತಾಯುಷಿಗೆ ಯಶಸ್ವಿ ಸೊಂಟದ ಕೀಲು ಶಸ್ತ್ರಚಿಕಿತ್ಸೆ
ಹುಬ್ಬಳ್ಳಿ: ವೈದ್ಯಕೀಯ ಕ್ಷೇತ್ರದಲ್ಲಿ ಹುಬ್ಬಳ್ಳಿ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ದೇಶದಲ್ಲೇ ಮೊದಲ ಬಾರಿಗೆ 101 ವರ್ಷದ ಶತಾಯುಷಿಯೊಬ್ಬರಿಗೆ ಅತ್ಯಂತ ಅಪರೂಪದ ಹಾಗೂ ಸವಾಲಿನ ಸೊಂಟದ ಕೀಲು (Hip Joint) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಹುಬ್ಬಳ್ಳಿಯ ವೈದ್ಯರ ತಂಡ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಶಿಗ್ಗಾಂವಿ ತಾಲೂಕಿನ ಚಿಕ್ಕಬೆಂಡಿಗೇರಿಯ 101 ವರ್ಷದ ನಿವೃತ್ತ ಶಿಕ್ಷಕ ಇಮಾಮಸಾಬ್ ಅವರು ಸೊಂಟದ ಕೀಲು ಸಮಸ್ಯೆಯಿಂದ ಬಳಲುತ್ತಿದ್ದರು. ಇವರಿಗೆ ಹುಬ್ಬಳ್ಳಿಯ ದಾಜಿಬಾನಪೇಟೆಯ ಎಲುಬು ಕೀಲು ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಅಸ್ಥಿ ತಜ್ಞ ಡಾ. ಭಾಸ್ಕರ್ ರಾವ್ ಹಾಗೂ ಅವರ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿತು.
ಕೇವಲ 40 ನಿಮಿಷಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿದ ವೈದ್ಯರ ತಂಡ, ಮರುದಿನವೇ ರೋಗಿಯನ್ನು ವಾಕರ್ ಸಹಾಯದಿಂದ ನಡೆಯುವಂತೆ ಮಾಡಿರುವುದು ಗಮನಾರ್ಹ ಸಾಧನೆಯಾಗಿದೆ. ಇಂತಹ ವಯಸ್ಸಿನಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದು ವೈದ್ಯಕೀಯವಾಗಿ ಅತ್ಯಂತ ಸವಾಲಿನ ಕೆಲಸವಾಗಿದ್ದು, ಅದರ ಯಶಸ್ಸು ವೈದ್ಯರ ಪರಿಣತಿಗೆ ಸಾಕ್ಷಿಯಾಗಿದೆ.
ಇನ್ನೊಂದು ವಿಶೇಷವೆಂದರೆ, ಸಾಮಾನ್ಯವಾಗಿ ₹4 ರಿಂದ ₹5 ಲಕ್ಷ ವೆಚ್ಚವಾಗುವ ಈ ಚಿಕಿತ್ಸೆಯನ್ನು ಕೇವಲ ₹1.40 ಲಕ್ಷ ವೆಚ್ಚದಲ್ಲಿ ಯಶಸ್ವಿಯಾಗಿ ಮಾಡಿಕೊಟ್ಟಿರುವುದು ರೋಗಿ ಮತ್ತು ಕುಟುಂಬಕ್ಕೆ ದೊಡ್ಡ ನೆರವಾಗಿದೆ.
ಹಿರಿಯ ನಾಗರಿಕರಲ್ಲಿ ಅತ್ಯಂತ ಅಪಾಯಕಾರಿ ಎನ್ನಲಾಗುವ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ ಡಾ. ಭಾಸ್ಕರ್ ರಾವ್ ಹಾಗೂ ಅವರ ವೈದ್ಯರ ತಂಡಕ್ಕೆ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ನಮ್ಮ ಜಿಲ್ಲೆಯ ಇಂತಹ ಹೆಮ್ಮೆಯ ಸುದ್ದಿಗಳಿಗಾಗಿ "ನ್ಯೂ ವಿಜಯ ನ್ಯೂಸ್" ಅನ್ನು ಫಾಲೋ ಮಾಡಿ.
إرسال تعليق