ಧಾರವಾಡ: ವಿವಿಧ ಸರ್ಕಾರಿ ಉದ್ಯೋಗ ನೇಮಕಾತಿಗಳಿಗೆ ಆಗ್ರಹಿಸಿ ಆಗಸ್ಟ್ 18ರಂದು ಧಾರವಾಡ ನಗರದಲ್ಲಿ ನಡೆಸಲು ಉದ್ದೇಶಿಸಿದ್ದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.
‘ಆಕ್ಸಾ’ ಸಂಘಟನೆಯ ರಾಜ್ಯಾಧ್ಯಕ್ಷ ಕಾಂತಕುಮಾರ್ ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳು ನಗರದ ಮಿಚಿಗನ್ ಕಾಂಪೌಂಡ್ ಬಳಿ ಧರಣಿ ನಡೆಸಲು ಉಪನಗರ ಪೊಲೀಸ್ ಠಾಣೆಗೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದರು. ಆದರೆ, ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ನಿರ್ದೇಶನದಂತೆ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಪ್ರತಿಭಟನೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹೈಕೋರ್ಟ್ ಆದೇಶವೂ ಉಲ್ಲೇಖ
ಈ ಹಿಂದೆ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೆಹರು ಮೈದಾನದಲ್ಲಿ ಗರಿಷ್ಠ 100 ಜನರಿಗೆ ಸೀಮಿತವಾಗಿ ಷರತ್ತುಬದ್ಧ ಪ್ರತಿಭಟನೆ ನಡೆಸಲು ಸೂಚಿಸಿತ್ತು. ಆದರೆ, ಸಂಘಟಕರು ಆ ಸ್ಥಳದಲ್ಲಿ ಪ್ರತಿಭಟನೆ ನಡೆಸುವ ಬದಲು ಮಿಚಿಗನ್ ಕಾಂಪೌಂಡ್ ಬಳಿ ಧರಣಿಗೆ ಅನುಮತಿ ಕೋರಿರುವುದನ್ನು ಪೊಲೀಸರು ಗಮನಿಸಿದ್ದಾರೆ.
ಹಿಂದಿನ ಹೋರಾಟದ ಅಹಿತಕರ ಘಟನೆಗಳ ಹಿನ್ನೆಲೆ
ಹಿಂದಿನ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳನ್ನು ಕೂಡ ಪೊಲೀಸರು ಪರಿಗಣಿಸಿದ್ದಾರೆ. ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಆಗಸ್ಟ್ 18ರ ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿದೆ.
ಉದ್ಯೋಗ ನೇಮಕಾತಿಗಳಿಗೆ ಸಂಬಂಧಿಸಿದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಮ್ಮೆ ಪೊಲೀಸ್ ಇಲಾಖೆಯ ನಿರ್ಧಾರ ಹಿನ್ನಡೆಯಾಗಿದೆ. ಇದೀಗ ಪ್ರತಿಭಟನಾಕಾರರು ಮುಂದಿನ ಹೋರಾಟದ ರೂಪುರೇಷೆ ಕುರಿತು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
Post a Comment