⚡ಟ್ರೆಂಡಿಂಗ್

ರೈತರಿಗೆ ಬ್ಯಾಂಕ್ ಯೋಜನೆಗಳ ಸಂಪೂರ್ಣ ಮಾಹಿತಿ ನೀಡಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್.

ರೈತರಿಗೆ ಬ್ಯಾಂಕ್ ಯೋಜನೆಗಳ ಸಂಪೂರ್ಣ ಮಾಹಿತಿ ನೀಡಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್.

ಸಾಲ ಅರ್ಜಿ ಸಲ್ಲಿಕೆಯಿಂದ ಮಂಜೂರಾತಿವರೆಗೆ ರೈತರಿಗೆ ಬ್ಯಾಂಕರ್‌ಗಳು ಅಗತ್ಯ ಸಹಕಾರ ನೀಡಬೇಕು

ಧಾರವಾಡ: ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಸಾಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಪ್ರತಿಯೊಬ್ಬ ಸಣ್ಣ ಹಾಗೂ ಅತಿಸಣ್ಣ ರೈತನಿಗೂ ಬ್ಯಾಂಕ್ ಸಾಲದ ಪ್ರಯೋಜನ ದೊರೆಯುವಂತೆ ಬ್ಯಾಂಕರ್‌ಗಳು ಕ್ರಮ ಕೈಗೊಳ್ಳಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೆ.2ರಂದು ಧಾರವಾಡ ಲೀಡ್ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ (DLRC) ಹಾಗೂ ಜಿಲ್ಲಾ ಸಲಹಾ ಸಮಿತಿ (DCC) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರಿಗೆ ಯಾವ ಬ್ಯಾಂಕ್‌ನಲ್ಲಿ ಯಾವ ರೀತಿಯ ಸಾಲ ಸೌಲಭ್ಯ ಲಭ್ಯವಿದೆ, ಸಾಲ ಪಡೆಯಲು ಇರುವ ಅರ್ಹತೆ, ಅಗತ್ಯ ದಾಖಲೆಗಳು, ಸಾಲದ ಮಿತಿ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಬ್ಯಾಂಕ್‌ಗಳ ನೋಟಿಸ್ ಬೋರ್ಡ್‌ಗಳಲ್ಲಿ ಯೋಜನೆಗಳ ವಿವರಗಳನ್ನು ಸ್ಪಷ್ಟವಾಗಿ ಅಳವಡಿಸಿ, ರೈತರಿಗೆ ಸುಲಭವಾಗಿ ಮಾಹಿತಿ ದೊರೆಯುವಂತೆ ಮಾಡಬೇಕು. ಅರ್ಹ ರೈತರ ಸಾಲ ಅರ್ಜಿಗಳನ್ನು 15 ದಿನಗಳೊಳಗಾಗಿ ವಿಲೇವಾರಿ ಮಾಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ರೈತರಿಗೆ ಅನಗತ್ಯ ತೊಂದರೆ ನೀಡಬೇಡಿ

ಸಣ್ಣ ಮತ್ತು ಅತಿಸಣ್ಣ ರೈತರು ಸಾಲಕ್ಕಾಗಿ ಬ್ಯಾಂಕ್‌ಗೆ ಬಂದಾಗ ಅವರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು. ಅರ್ಜಿ ಸಲ್ಲಿಸುವ ಹಂತದಿಂದ ಸಾಲ ಮಂಜೂರಾಗುವವರೆಗಿನ ಪ್ರಕ್ರಿಯೆಯಲ್ಲಿ ಬ್ಯಾಂಕರ್‌ಗಳು ರೈತರಿಗೆ ಸಹಕರಿಸಬೇಕು. ಯಾವುದೇ ಕಾರಣಕ್ಕೂ ರೈತರಿಗೆ ಅನಗತ್ಯ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ರೈತರು ಬ್ಯಾಂಕ್‌ಗಳ ಪ್ರಮುಖ ಗ್ರಾಹಕರಾಗಿದ್ದು, ಸಾರ್ವಜನಿಕರ ಸೇವೆಗಾಗಿ ಬ್ಯಾಂಕಿಂಗ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಬ್ಯಾಂಕ್ ಸಿಬ್ಬಂದಿ ರೈತರೊಂದಿಗೆ ಸೌಜನ್ಯಯುತವಾಗಿ ಹಾಗೂ ಗೌರವದಿಂದ ವರ್ತಿಸಬೇಕು. ರೈತರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಅನುಕೂಲಕರ ವಾತಾವರಣ ನಿರ್ಮಿಸಬೇಕು ಎಂದು ತಿಳಿಸಿದರು.

ಸಹಾಯಧನ ಪಡೆಯಲು ಖಾತೆ ಸ್ಥಗಿತ ಸಮಸ್ಯೆ ಪರಿಹರಿಸಲು ಸೂಚನೆ

ಎನ್‌ಪಿಎ ಆಗಿರುವ ಬೆಳೆ ಸಾಲ ಖಾತೆಗಳಿಗೆ ಸಂಬಂಧಿಸಿದ ಉಳಿತಾಯ ಖಾತೆಗಳು ಸ್ಥಗಿತಗೊಂಡಿರುವುದರಿಂದ, ಸರ್ಕಾರದಿಂದ ಜಮೆಯಾಗುವ ಜೀವನೋಪಾಯ ಸಹಾಯಧನದ ಹಣವನ್ನು ಪಡೆಯಲು ಫಲಾನುಭವಿಗಳು ಬ್ಯಾಂಕ್‌ಗೆ ಆಗಮಿಸಿ ಖಾತೆಯನ್ನು ಮರುಚಾಲ್ತಿಗೊಳಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ ಎಂಬ ವಿಷಯ ಸಭೆಯಲ್ಲಿ ಚರ್ಚೆಯಾಯಿತು.

ಈ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರದಿಂದ ಜಮೆಯಾಗುವ ಜೀವನೋಪಾಯ ಸಹಾಯಧನವನ್ನು ಸುಲಭವಾಗಿ ಹಿಂಪಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಕೃಷಿ, ಯಂತ್ರೋಪಕರಣ, ನೀರಾವರಿ ಹಾಗೂ ಪಶುಸಂಗೋಪನೆ ಸಾಲಗಳ ಮಾಹಿತಿ ನೀಡಿ

ರೈತರಿಗೆ ಕೇವಲ ಕೃಷಿ ಸಾಲದ ಮಾಹಿತಿ ನೀಡುವುದಷ್ಟೇ ಅಲ್ಲದೆ ಬೆಳೆ ಸಾಲ, ಕೃಷಿ ಯಂತ್ರೋಪಕರಣಗಳ ಸಾಲ, ನೀರಾವರಿ, ಪಶುಸಂಗೋಪನೆ ಸೇರಿದಂತೆ ಬ್ಯಾಂಕ್‌ಗಳ ಮೂಲಕ ಲಭ್ಯವಿರುವ ವಿವಿಧ ಯೋಜನೆಗಳ ಕುರಿತು ಮಾಹಿತಿ ತಲುಪಿಸಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಅರ್ಹ ರೈತರು ಸರ್ಕಾರಿ ಯೋಜನೆಗಳು ಹಾಗೂ ಬ್ಯಾಂಕ್ ಸಾಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಬೆಳೆ ವಿಮೆ ಹಣದಲ್ಲಿ ನಿಯಮಬಾಹಿರ ಕಡಿತವಿದೆಯೇ ಪರಿಶೀಲಿಸಿ

ಕೆಲವು ಬ್ಯಾಂಕ್‌ಗಳಲ್ಲಿ ರೈತರಿಗೆ ಮಂಜೂರಾಗುವ ಬೆಳೆ ವಿಮೆ ಮೊತ್ತದಿಂದ ಹಣ ಕಡಿತಗೊಳಿಸಲಾಗುತ್ತಿದೆ ಎಂಬ ದೂರುಗಳಿದ್ದರೆ, ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಬೆಳೆ ವಿಮೆ ಹಣ ರೈತರ ಖಾತೆಗೆ ಜಮೆಯಾದ ಸಂದರ್ಭದಲ್ಲಿ ಯಾವುದೇ ನಿಯಮಬಾಹಿರ ಕಡಿತ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಿ, ವಾಸ್ತವಾಂಶವನ್ನು ರೈತರಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದರು.

ಬೆಳೆ ವಿಮೆ ಕುರಿತು ರೈತರಿಗೆ ಸ್ಪಷ್ಟ ಮಾಹಿತಿ ನೀಡಿ: ಭುವನೇಶ ಪಾಟೀಲ್

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ್ ಮಾತನಾಡಿ, ರೈತರು ಬೆಳೆ ಸಾಲ ಪಡೆಯುವ ಸಂದರ್ಭದಲ್ಲಿ ಬೆಳೆ ವಿಮೆ ಸೇರಿದಂತೆ ಸಂಬಂಧಿಸಿದ ಸೌಲಭ್ಯಗಳ ಕುರಿತು ಬ್ಯಾಂಕ್‌ಗಳಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಬೆಳೆ ವಿಮೆಯ ಪ್ರೀಮಿಯಂ, ನೋಂದಣಿ ಅವಧಿ, ವಿಮಾ ವ್ಯಾಪ್ತಿಗೆ ಒಳಪಡುವ ಬೆಳೆಗಳು ಹಾಗೂ ಬೆಳೆ ಹಾನಿಯಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬ್ಯಾಂಕ್ ಸಿಬ್ಬಂದಿ ರೈತರಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದು ಹೇಳಿದರು.

ಬೆಳೆ ಹಾನಿಯಾದ ಸಂದರ್ಭದಲ್ಲಿ ವಿಮಾ ಪರಿಹಾರ ಪಡೆಯುವ ಪ್ರಕ್ರಿಯೆಯಲ್ಲಿಯೂ ಬ್ಯಾಂಕ್‌ಗಳು ಅಗತ್ಯ ಮಾರ್ಗದರ್ಶನ ನೀಡಬೇಕು. ಮಾಹಿತಿಯ ಕೊರತೆಯಿಂದ ಯಾವುದೇ ಅರ್ಹ ರೈತರು ಬೆಳೆ ವಿಮೆ ಸೌಲಭ್ಯದಿಂದ ವಂಚಿತರಾಗದಂತೆ ಬ್ಯಾಂಕ್‌ಗಳು ಹಾಗೂ ಕೃಷಿ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಭುವನೇಶ ಪಾಟೀಲ್ ಹೇಳಿದರು.

ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಬ್ಯಾಂಕ್ ಆಫ್ ಬರೋಡದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹರ್ಷಾ ಟಿ.ಜಿ., ಆರ್‌ಬಿಐ ಬೆಂಗಳೂರು ಸಹಾಯಕ ಪ್ರಧಾನ ವ್ಯವಸ್ಥಾಪಕ ಅರುಣಕುಮಾರ, ಲೀಡ್ ಬ್ಯಾಂಕ್ ಜಿಲ್ಲಾ ಮುಖ್ಯ ವ್ಯವಸ್ಥಾಪಕ ಬಸವರಾಜ ಗಡಾದವರ, ನಾಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ್ ಕಾಂಬಳೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

— ನ್ಯೂ ವಿಜಯ ನ್ಯೂಸ್ | ಸತ್ಯ.... ನೇರ.... ನಿರಂತರ

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...