ಕರ್ನಾಟಕದಲ್ಲಿ ರಾಜಕೀಯ ಬದಲಾವಣೆಯ ಕನಸಿನೊಂದಿಗೆ “JJJ – ಜನರ ಜೊತೆ ಜಗದೀಶ್” ಹೊಸ ನಡೆ
ಬೆಂಗಳೂರು: ಕರ್ನಾಟಕದಲ್ಲಿ ಸಾಮಾನ್ಯ ಜನರ ಧ್ವನಿಯಾಗಿ ಹೊಸ ರಾಜಕೀಯ ಪರ್ಯಾಯ ನಿರ್ಮಿಸುವ ಉದ್ದೇಶದೊಂದಿಗೆ “JJJ – ಜನರ ಜೊತೆ ಜಗದೀಶ್” ಎಂಬ ಹೆಸರಿನಲ್ಲಿ ಹೊಸ ರಾಜಕೀಯ ಪ್ರಯತ್ನ ಆರಂಭಿಸುವುದಾಗಿ ವಕೀಲ ಕೆ.ಎನ್. ಜಗದೀಶ್ ಕುಮಾರ್ ತಿಳಿಸಿದ್ದಾರೆ.
“ಸಾಮಾನ್ಯ ಜನರಿಂದ, ಸಾಮಾನ್ಯ ಜನರಿಗಾಗಿ, ಸಾಮಾನ್ಯ ಜನರ ಸರ್ಕಾರ ಸ್ಥಾಪಿಸುವುದು ನಮ್ಮ ಗುರಿ” ಎಂದು ಹೇಳಿರುವ ಅವರು, ಕರ್ನಾಟಕದ ಜನರ ಪ್ರೀತಿ, ಪ್ರೋತ್ಸಾಹ ಹಾಗೂ ಸಹಕಾರ ಕೋರಿದ್ದಾರೆ.
ರಾಜ್ಯದಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಸಮಸ್ಯೆಗಳು ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ತಳ್ಳಿವೆ ಎಂದು ಅವರು ಆರೋಪಿಸಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಕೋಟಿ ಕೋಟಿ ನಾಗರಿಕರು, ಸಾವಿರಾರು ಹಳ್ಳಿಗಳು, ಸರ್ಕಾರಿ ಶಾಲೆಗಳು, ಕಾಲೇಜುಗಳು, ಕೃಷಿ ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಗಾಗಿ ಜನಪರ ಆಡಳಿತ ಬೇಕಾಗಿದೆ ಎಂಬುದು ತಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.
ರೈತರ ಭೂಮಿ ಸಂರಕ್ಷಣೆ, ಭ್ರಷ್ಟಾಚಾರ ಮುಕ್ತ ಆಡಳಿತ, ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ ವ್ಯವಸ್ಥೆ ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ರಾಜಕೀಯ ಪರ್ಯಾಯವನ್ನು ಕಟ್ಟುವ ಪ್ರಯತ್ನ ಇದಾಗಿದೆ ಎಂದು ಹೇಳಿದ್ದಾರೆ.
ಸ್ವೀಡನ್, ನೆದರ್‌ಲ್ಯಾಂಡ್ಸ್, ಫಿನ್‌ಲ್ಯಾಂಡ್ ಸೇರಿದಂತೆ ಹಲವು ದೇಶಗಳ ಜನಪರ ಆಡಳಿತ ಮಾದರಿಗಳನ್ನು ಉದಾಹರಿಸಿ, ಕರ್ನಾಟಕದಲ್ಲಿಯೂ ಜನರಿಗೆ ನೆಮ್ಮದಿ ಮತ್ತು ಉತ್ತಮ ಭವಿಷ್ಯ ನೀಡುವ ವ್ಯವಸ್ಥೆ ನಿರ್ಮಿಸಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
“ನಿಮ್ಮಲ್ಲಿ ನಾನು ಒಬ್ಬ, ನಾನು ನಿಮ್ಮ ಮನೆ ಮಗ. ನನ್ನ ನಡೆ ನಿಮ್ಮ ನೆಮ್ಮದಿಗಾಗಿ ಹಾಗೂ ನಿಮ್ಮ ಭವಿಷ್ಯಕ್ಕಾಗಿ. ಬದಲಾವಣೆಗೆ ಒಂದು ಅವಕಾಶ ನೀಡಿ” ಎಂದು ಕೆ.ಎನ್. ಜಗದೀಶ್ ಕುಮಾರ್ ಜನರಲ್ಲಿ ಮನವಿ ಮಾಡಿದ್ದಾರೆ.
ವರದಿ: ನ್ಯೂ ವಿಜಯ ನ್ಯೂಸ್
Post a Comment