ಬ್ರೇಕಿಂಗ್ ನ್ಯೂಸ್ | ರಾಜ್ಯದ ಅಭಿವೃದ್ಧಿಗೆ ಹೊಸ ರೂಪ – ಹೊಸ ವೇಗ ನೀಡಲು ಸಿಎಂ ಡಿ.ಕೆ. ಶಿವಕುಮಾರ್ ಸಂಕಲ್ಪ
ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
“ಜನರು ನೀಡಿರುವ ಅವಕಾಶವನ್ನು ಅಧಿಕಾರವೆಂದು ಭಾವಿಸದೆ, ಸೇವೆಯ ಭಾಗ್ಯವೆಂದು ಪರಿಗಣಿಸಿ ಜನಪರ ಕಾರ್ಯಕ್ರಮಗಳನ್ನು ನಾಡಿಗೆ ಅರ್ಪಿಸುತ್ತಿದ್ದೇವೆ” ಎಂದು ಸಿಎಂ ಹೇಳಿದ್ದಾರೆ.
ಸಚಿವ ಸಂಪುಟದ ಪ್ರಮುಖ ನಿರ್ಧಾರಗಳು:
🔹 ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
ರಾಜ್ಯದ ಎಲ್ಲಾ ಹಂತದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ಉಚಿತ ಬಸ್ ಪಾಸ್ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಅರ್ಜಿ ಪ್ರಕ್ರಿಯೆ ಕುರಿತು ಸಾರಿಗೆ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಲಿದೆ.
🔹 56 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ
ರಾಜ್ಯದಲ್ಲಿ ಉದ್ಯೋಗ ಸಮಸ್ಯೆ ನಿವಾರಣೆಗೆ 56,000 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ವೇಗ ನೀಡಲು ಸರ್ಕಾರ ನಿರ್ಧರಿಸಿದೆ.
🔹 ‘ಯುವ ಉದ್ಯೋಗ ಸೇತು’ ಯೋಜನೆ
ಖಾಸಗಿ ಕಂಪನಿಗಳು ಮತ್ತು ಉದ್ಯೋಗಾಕಾಂಕ್ಷಿ ಯುವಕರ ನಡುವೆ ಸಂಪರ್ಕ ಕಲ್ಪಿಸಲು ‘ಯುವ ಉದ್ಯೋಗ ಸೇತು’ ವ್ಯವಸ್ಥೆ ಜಾರಿಗೆ ತರಲು ನಿರ್ಣಯಿಸಲಾಗಿದೆ. ಯುವಕರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಒದಗಿಸುವ ಗುರಿ ಹೊಂದಲಾಗಿದೆ.
🔹 ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ
ಖಾಸಗಿ ವಲಯದಲ್ಲಿಯೂ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸಲು ಕಂಪನಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
🔹 10,000 ಭಾರತ ಜೋಡೋ ಯುವಕ ಸಂಘ ಸ್ಥಾಪನೆ
ಪ್ರತಿ ಪಂಚಾಯತಿ ಮಟ್ಟದಲ್ಲಿ ಯುವಕ ಸಂಘ ರಚಿಸಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ನಾಯಕತ್ವ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುವುದು. ಪ್ರತಿ ಸಂಘಕ್ಕೆ ₹10 ಲಕ್ಷ ಅನುದಾನ ನೀಡಲು ತೀರ್ಮಾನಿಸಲಾಗಿದೆ.
🔹 ಬೆಂಗಳೂರು ನಿವಾಸಿಗಳಿಗೆ OC, CC ವಿನಾಯಿತಿ
2500 ಅಡಿ ನಿವೇಶನಗಳಲ್ಲಿನ ವಸತಿ ಕಟ್ಟಡಗಳಿಗೆ ಒಮ್ಮೆ ಮಾತ್ರ OC ಮತ್ತು CC ನಿಯಮದಲ್ಲಿ ವಿನಾಯಿತಿ ನೀಡಲು ನಿರ್ಧಾರ.
🔹 ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಅಭಿಯಾನ
ಬಿ ಖಾತೆ ಆಸ್ತಿಗಳನ್ನು ಎ ಖಾತೆಯಾಗಿ ಪರಿವರ್ತಿಸುವ ಅಭಿಯಾನವನ್ನು ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ.
🔹 ನಗರ ರಸ್ತೆ ಅಭಿವೃದ್ಧಿಗೆ ₹2000 ಕೋಟಿ
ಬೆಂಗಳೂರು ಸೇರಿದಂತೆ ನಗರ ಮೂಲಸೌಕರ್ಯ ಬಲಪಡಿಸಲು ರಸ್ತೆ ಅಭಿವೃದ್ಧಿಗಾಗಿ ₹2000 ಕೋಟಿ ಅನುದಾನ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ.
ರಾಜ್ಯದ ಯುವಕರು, ವಿದ್ಯಾರ್ಥಿಗಳು, ರೈತರು ಹಾಗೂ ಸಾಮಾನ್ಯ ಜನರ ಭವಿಷ್ಯಕ್ಕಾಗಿ ಅಭಿವೃದ್ಧಿ ಕೇಂದ್ರಿತ ಆಡಳಿತ ನೀಡುವುದು ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನ್ಯೂ ವಿಜಯ ನ್ಯೂಸ್ | ಬೆಂಗಳೂರು
Post a Comment