ನವದೆಹಲಿ, ಜೂ. 27: 'ಆಪರೇಷನ್ ಸಿಂಧೂರ್' ವೇಳೆ ಹುತಾತ್ಮರಾದ ಭಾರತೀಯ ಸೈನಿಕರ ಮಾಹಿತಿಯನ್ನು ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟು ಸಂಸತ್ತನ್ನು ದಾರಿ ತಪ್ಪಿಸಿದೆ ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್ ಗಂಭೀರ ಆರೋಪ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಆಪರೇಷನ್ ಸಿಂಧೂರ್' ವೇಳೆ ಹುತಾತ್ಮರಾದ ಸೈನಿಕರ ಹೆಸರುಗಳನ್ನು ಇದೀಗ ಕೇಂದ್ರ ಸರ್ಕಾರ ಬಹಿರಂಗಪಡಿಸಿದೆ ಎಂದು ತಿಳಿಸಿದ್ದಾರೆ. ಅವರ ಪ್ರಕಾರ, ಸುಬೇದಾರ್ ಮೇಜರ್ ಪವನ್ ಕುಮಾರ್, ವೀರ ಚಕ್ರ ಪುರಸ್ಕೃತ ರೈಫಲ್‌ಮ್ಯಾನ್ ಸುನಿಲ್ ಕುಮಾರ್, ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್, ವಾಯುಯಾನ ತಂತ್ರಜ್ಞ ಮುರಳಿ ನಾಯಕ್, ಹವಿಲ್ದಾರ್ ಸುನಿಲ್ ಕುಮಾರ್ ಸಿಂಗ್ ಹಾಗೂ ವಾಯುಸೇನಾ ಪದಕ ಪುರಸ್ಕೃತ ಸಾರ್ಜೆಂಟ್ ಸುರೇಂದ್ರ ಕುಮಾರ್ ಅವರು ಈ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದಾರೆ.
ಸುಪ್ರಿಯಾ ಶ್ರಿನೇತ್ ಆರೋಪಿಸಿರುವಂತೆ, ಜುಲೈ 28, 2025ರಂದು ಸಂಸತ್ತಿನಲ್ಲಿ ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 'ಆಪರೇಷನ್ ಸಿಂಧೂರ್' ವೇಳೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ತಿಳಿಸಿದ್ದರು. ಆದರೆ ಇದೀಗ ಸರ್ಕಾರವೇ ಹುತಾತ್ಮರಾದ ಸೈನಿಕರ ವಿವರಗಳನ್ನು ಬಹಿರಂಗಪಡಿಸಿರುವುದು, ಸಂಸತ್ತಿಗೆ ತಪ್ಪು ಮಾಹಿತಿ ನೀಡಲಾಗಿತ್ತು ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.
"ಇದು ಸಂಸತ್ತಿನ ಸವಲತ್ತುಗಳ ಉಲ್ಲಂಘನೆ ಹಾಗೂ ಸದನಕ್ಕೆ ಮಾಡಿದ ಅವಮಾನವಾಗಿದೆ. ಸರ್ಕಾರ ತನ್ನ ರಾಜಕೀಯ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಬಲಿದಾನವನ್ನು ನಿರಾಕರಿಸಿದೆ. ಇದು ಹುತಾತ್ಮರಿಗೆ ಮಾಡಿದ ದೊಡ್ಡ ಅವಮಾನ" ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ.
ಈ ಕುರಿತು ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯ ವಿಡಿಯೊ ಲಿಂಕ್‌ನ್ನೂ ಸುಪ್ರಿಯಾ ಶ್ರಿನೇತ್ ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಸೂಚನೆ: ಈ ಆರೋಪಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಥವಾ ರಕ್ಷಣಾ ಸಚಿವಾಲಯದಿಂದ ಅಧಿಕೃತ ಪ್ರತಿಕ್ರಿಯೆ ಪ್ರಕಟವಾಗಿಲ್ಲ.
Post a Comment