ರಾಯಚೂರು: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ (Cross Voting) ಮಾಡಿರುವ ಆರೋಪವನ್ನು ಲಿಂಗಸುಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ತಳ್ಳಿಹಾಕಿದ್ದು, ಒಂದೇ ಒಂದು ಸಾಕ್ಷ್ಯ ತೋರಿಸಿದರೂ ಇಂದೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.
ರಾಯಚೂರಿನ ಲಿಂಗಸುಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸುತ್ತಾ, ಗೇಟ್ ಕಾಯುತ್ತಾ ಜೀವನ ಸಾಗಿಸಲು ಸಿದ್ಧನಿದ್ದೇನೆ. ಪಕ್ಷದ ನಾಯಕರು ಆಣೆ-ಪ್ರಮಾಣದಲ್ಲಿ ಯಾವ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧನಾಗಿದ್ದೇನೆ" ಎಂದು ಹೇಳಿದರು.
ಮೈಸೂರಿನ ಪತ್ರಿಕೆಯೊಂದರಲ್ಲಿ ತಮ್ಮ ಹೆಸರು ಪ್ರಕಟವಾಗಿದೆ ಎಂದು ಕೇಳಿದ್ದೇನೆ. ಆದರೆ ಅಡ್ಡ ಮತದಾನ ಮಾಡಿರುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವಜ್ಜಲ್, "ನಾನು ಬಿಜೆಪಿ ಶಾಸಕನಾಗಿದ್ದರೂ ಇಂದಿಗೂ ನನ್ನನ್ನು ಅವರ ಕಚೇರಿಗೆ ಬರಲು ಬಿಡಲಿಲ್ಲ. ಕ್ಷೇತ್ರಕ್ಕೆ ಅನುದಾನ ಕೇಳಿದಾಗಲೂ 'ಬಿಜೆಪಿ ಶಾಸಕನಿಗೆ ಯಾಕೆ ಕೊಡಬೇಕು' ಎಂಬ ರೀತಿಯಲ್ಲಿ ಮಾತನಾಡಿದ್ದಾರೆ" ಎಂದು ಆರೋಪಿಸಿದರು.
ತಮ್ಮ ಗುತ್ತಿಗೆ ವ್ಯವಹಾರದ ಕುರಿತು ಮಾತನಾಡಿದ ಅವರು, "40 ವರ್ಷಗಳಿಂದ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದೇನೆ. ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ ಮೂರು ವರ್ಷಗಳಿಂದ ನನ್ನ ಕಂಪನಿಯ ಕಚೇರಿಯನ್ನೇ ಬಂದ್ ಮಾಡಿದ್ದೇನೆ. ಸರ್ಕಾರ ನನ್ನ ₹700 ರಿಂದ ₹750 ಕೋಟಿ ಬಿಲ್‌ಗಳನ್ನು ಬಾಕಿ ಉಳಿಸಿಕೊಂಡಿದ್ದು, ಇದುವರೆಗೆ ಒಂದು ರೂಪಾಯಿಯನ್ನೂ ಪಾವತಿಸಿಲ್ಲ. ಅಲ್ಲದೆ ₹172 ಕೋಟಿ ರಿಕವರಿಯನ್ನೂ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾನು ಕಾಂಗ್ರೆಸ್‌ಗೆ ಮತ ಹಾಕಬೇಕಾ?" ಎಂದು ಪ್ರಶ್ನಿಸಿದರು.
ವಿಧಾನಪರಿಷತ್ ಚುನಾವಣೆಯ ಅಡ್ಡ ಮತದಾನ ಆರೋಪದ ನಡುವೆ ಶಾಸಕ ಮಾನಪ್ಪ ವಜ್ಜಲ್ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
Post a Comment