ನವದೆಹಲಿ, ಜೂ. 28: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ VB G RAM G ಕಾಯ್ದೆಯು ಅಧಿಕಾರದ ಕೇಂದ್ರೀಕರಣಕ್ಕೆ ಕಾರಣವಾಗುವುದಲ್ಲದೆ, ರಾಜ್ಯಗಳ ಮೇಲೆ ಭಾರಿ ಆರ್ಥಿಕ ಹೊರೆಯನ್ನು ಹೇರುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಗ್ರಾಮೀಣಾಭಿವೃದ್ಧಿ ಸಂಸದೀಯ ಸ್ಥಾಯಿ ಸಮಿತಿ, ರಾಜ್ಯ ಸರ್ಕಾರಗಳು ಹಾಗೂ ಇತರ ಸಂಬಂಧಿತ ಪಾಲುದಾರರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ, ಕೇಂದ್ರ ಸರ್ಕಾರ ಮನರೇಗಾ (MGNREGA)ಗೆ ಬದಲಾಗಿ ಹೊಸ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದೆ ಎಂದು ಟೀಕಿಸಿದ್ದಾರೆ.
ಜುಲೈ 1ರಿಂದ ಜಾರಿಗೆ ಬರಲಿರುವ VB G RAM G ಕಾಯ್ದೆ ಬಗ್ಗೆ ಹಲವು ರಾಜ್ಯಗಳು ಗಂಭೀರ ಕಳವಳ ವ್ಯಕ್ತಪಡಿಸಿವೆ ಎಂದು ಅವರು ತಿಳಿಸಿದ್ದಾರೆ.
ಮಧ್ಯಪ್ರದೇಶ, ಬಿಹಾರ ಮತ್ತು ಉತ್ತರಾಖಂಡ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳೇ ಹೆಚ್ಚುವರಿ ವೆಚ್ಚದ ಹೊರೆ ಹಾಗೂ ಅನುಷ್ಠಾನದ ಸವಾಲುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿವೆ ಎಂದು ಹೇಳಿದ್ದಾರೆ.
ಬೇಸಾಯದ ಪ್ರಮುಖ ಅವಧಿಯಲ್ಲಿ ಯೋಜನೆಯನ್ನು ಸ್ಥಗಿತಗೊಳಿಸುವ ನಿಯಮವನ್ನು ನಾಲ್ಕು ರಾಜ್ಯಗಳು ವಿರೋಧಿಸಿವೆ. ಅಲ್ಲದೆ, ಕನಿಷ್ಠ ಐದು ರಾಜ್ಯಗಳು ಗ್ರಾಮೀಣ ಕಾರ್ಮಿಕರ ವೇತನ ಹೆಚ್ಚಳಕ್ಕೆ ಒತ್ತಾಯಿಸಿವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಸ್ವಂತ ರಾಜ್ಯವಾದ ಮಧ್ಯಪ್ರದೇಶವೂ ಈ ಹೊಸ ಯೋಜನೆ ಕುರಿತು ಕಳವಳ ವ್ಯಕ್ತಪಡಿಸಿರುವುದನ್ನು ಉಲ್ಲೇಖಿಸಿದ ಅವರು, ಈ ಕಾಯ್ದೆಯು ಗ್ರಾಮೀಣ ಕಾರ್ಮಿಕರ ಚೌಕಾಸಿ ಶಕ್ತಿಯನ್ನು ದುರ್ಬಲಗೊಳಿಸಿ, ಅಧಿಕಾರವನ್ನು ಕೇಂದ್ರದ ಕೈಯಲ್ಲಿ ಕೇಂದ್ರೀಕರಿಸುವ ಏಕೈಕ ಗ್ಯಾರಂಟಿ ನೀಡುತ್ತದೆ ಎಂದು ಆರೋಪಿಸಿದ್ದಾರೆ.
Post a Comment