ಬಳ್ಳಾರಿ: ನಗರದ ವೀರಶೈವ ವಿದ್ಯಾವರ್ಧಕ ಸಂಘದ ಹೀರದಸೂಗಮ್ಮ ಶಾಲೆಯ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.
ಕಾರ್ಯಕ್ರಮದಲ್ಲಿ ಮೈಕ್ ವ್ಯವಸ್ಥೆ ಸಮರ್ಪಕವಾಗಿರದಿರುವುದು ಹಾಗೂ ವೇದಿಕೆಯಲ್ಲಿ ಗದ್ದಲದ ನಡುವೆಯೇ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡುತ್ತಿದ್ದರು. ಇದೇ ವೇಳೆ ಸಚಿವ ಈಶ್ವರ ಖಂಡ್ರೆ ಹಾಗೂ ಶಾಸಕ ನಾರಾ ಭರತ್‌ರೆಡ್ಡಿ ಕಾರ್ಯಕ್ರಮಕ್ಕೆ ಆಗಮಿಸಿದರು.
ಅತಿಥಿಗಳ ಆಗಮನದ ಕುರಿತು ನಿರೂಪಕರು ಪದೇಪದೇ ಘೋಷಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸ್ವಾಮೀಜಿ ಅಸಮಾಧಾನಗೊಂಡರು ಎನ್ನಲಾಗಿದೆ. ಕಾರ್ಯಕ್ರಮದ ವಾತಾವರಣದಿಂದ ಬೇಸರಗೊಂಡ ಶ್ರೀಗಳು ತಮ್ಮ ಆಶೀರ್ವಚನವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.
ಬಳಿಕ ಮೈಕ್ ಅನ್ನು ಸಚಿವ ಈಶ್ವರ ಖಂಡ್ರೆ ಅವರಿಗೆ ಹಸ್ತಾಂತರಿಸಿದ ಗವಿಸಿದ್ದೇಶ್ವರ ಸ್ವಾಮೀಜಿ, ತಮಗೆ ನೀಡಲಾಗಿದ್ದ ದೇಣಿಗೆಯನ್ನೂ ವಾಪಸ್ ನೀಡಿ ವೇದಿಕೆಯಿಂದ ನಿರ್ಗಮಿಸಿದರು ಎಂದು ತಿಳಿದುಬಂದಿದೆ.
ಸ್ವಾಮೀಜಿಗಳ ಈ ನಡೆ ಇದೀಗ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಾರ್ಯಕ್ರಮದ ವೇಳೆ ನಡೆದ ಘಟನೆ ಕುರಿತು ವಿವಿಧ ರೀತಿಯ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ನಡೆಯುತ್ತಿವೆ.
Post a Comment