ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿರುದ್ಧ ಸಿಡಿದೆದ್ದ ಶಿವಳ್ಳಿ ಜನತೆ: ಘನತ್ಯಾಜ್ಯ ಘಟಕ ಕಾಮಗಾರಿ ಸ್ಥಗಿತಕ್ಕೆ ಆಗ್ರಹ
ಧಾರವಾಡ, ಜು. 3: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಧಾರವಾಡ ತಾಲೂಕಿನ ಹೆಬ್ಬಳ್ಳಿ ಬಳಿಯ ಗುಡ್ಡದ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕ (ಕಸದ ಘಟಕ) ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಶಿವಳ್ಳಿ ಗ್ರಾಮಸ್ಥರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಗ್ರಾಮಸ್ಥರು, ವಸತಿ ಪ್ರದೇಶಗಳು ಹಾಗೂ ಫಲವತ್ತಾದ ಕೃಷಿ ಭೂಮಿಗೆ ಅತೀ ಸಮೀಪದಲ್ಲೇ ಕಸದ ಘಟಕ ನಿರ್ಮಾಣವಾಗುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಯೋಜನೆಯಿಂದ ಪರಿಸರ ಮಾಲಿನ್ಯ ಉಂಟಾಗುವುದರ ಜೊತೆಗೆ ದುರ್ವಾಸನೆ, ಸಾಂಕ್ರಾಮಿಕ ರೋಗಗಳ ಹರಡುವಿಕೆ ಹಾಗೂ ಭೂಗರ್ಭ ಜಲಮಾಲಿನ್ಯದಂತಹ ಗಂಭೀರ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ನಗರದ ಸಂಪೂರ್ಣ ಘನತ್ಯಾಜ್ಯವನ್ನು ಗ್ರಾಮೀಣ ಪ್ರದೇಶಕ್ಕೆ ತಂದು ವಿಲೇವಾರಿ ಮಾಡುವುದರಿಂದ ಸ್ಥಳೀಯ ನಿವಾಸಿಗಳ ಆರೋಗ್ಯ, ಕೃಷಿ ಚಟುವಟಿಕೆ ಮತ್ತು ಜೀವನಮಟ್ಟದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಅಭಿವೃದ್ಧಿಯ ಹೆಸರಿನಲ್ಲಿ ಗ್ರಾಮಗಳ ನೆಮ್ಮದಿ ಹಾಗೂ ಪರಿಸರವನ್ನು ಹಾಳು ಮಾಡಬಾರದು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನಾಕಾರರು, "ಯಾವುದೇ ಕಾರಣಕ್ಕೂ ಹೆಬ್ಬಳ್ಳಿ ಗುಡ್ಡದ ಬಳಿ ಘನತ್ಯಾಜ್ಯ ಘಟಕದ ಕಾಮಗಾರಿಯನ್ನು ಮುಂದುವರಿಸಬಾರದು. ಮಹಾನಗರ ಪಾಲಿಕೆ ತಕ್ಷಣವೇ ಈ ಯೋಜನೆಯನ್ನು ಕೈಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು," ಎಂದು ಎಚ್ಚರಿಕೆ ನೀಡಿದರು.
ಘಟನೆ ಹಿನ್ನೆಲೆಯಲ್ಲಿ ಯೋಜನೆ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವರೇ ಎಂಬುದು ಕಾದು ನೋಡಬೇಕಿದೆ. ಗ್ರಾಮಸ್ಥರ ಪ್ರತಿಭಟನೆಗೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಬೆಂಬಲ ಸೂಚಿಸಿದರು.
Post a Comment