ಯಲ್ಲಾಪುರ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್‌ನ ಬಳಗಾರ್ ಸಮೀಪ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಧಾರವಾಡ ಮೂಲದ ಆರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಮೃತಪಟ್ಟವರು ಹುಬ್ಬಳ್ಳಿ–ಧಾರವಾಡದಲ್ಲಿ ಸ್ವಿಗ್ಗಿ ಸಂಸ್ಥೆಯಲ್ಲಿ ಪಾರ್ಟ್‌ಟೈಮ್ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು. ಬಿಡುವಿನ ವೇಳೆಯಲ್ಲಿ ಧರ್ಮಸ್ಥಳ ಹಾಗೂ ಮಂಗಳೂರು ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ತೂಫಾನ್ ಕಮರ್ಷಿಯಲ್ ವಾಹನ (KA19AA5920) ಅರಬೈಲ್ ಘಾಟ್‌ನ ಬಳಗಾರ್ ಸಮೀಪ ಎದುರಿನಿಂದ ಬಂದ ಲಾರಿ (KA22AA1008)ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ತೂಫಾನ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರಂತವು ಧಾರವಾಡ ಜಿಲ್ಲೆಯಾದ್ಯಂತ ಶೋಕದ ವಾತಾವರಣ ನಿರ್ಮಿಸಿದೆ.
ಮೃತರ ವಿವರ
ಬಸವರಾಜ್ (48)
ಅಭಿಷೇಕ್ ಈಶ್ವರ್ (28)
ಅಕ್ಷಯ (26)
ಅಭಿಷೇಕ್ (26)
ಸಂಜೀವ/ಸಂಜಯ ಅಂಗಡಿ (33) – ವಾಹನ ಚಾಲಕ
ಮಂಜುನಾಥ ಚುಲಕಿ (32)
ಗಾಯಾಳುಗಳ ವಿವರ
ಅಪಘಾತದಲ್ಲಿ ಶಿವರಾಜ್ ದುರ್ಗಪ್ಪ ಮಡಿವಾಳ್ (22), ಸಚಿನ್ ಹಾಗೂ ಚೆನ್ನಬಸಯ್ಯ ಬಸಲಿಂಗಯ್ಯ ಸಂಪಗಾವ (28) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಈ ದುರಂತದಲ್ಲಿ ಮೃತಪಟ್ಟ ಯುವಕರ ಅಗಲಿಕೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಹೋದ್ಯೋಗಿಗಳಲ್ಲಿ ತೀವ್ರ ದುಃಖ ಮೂಡಿಸಿದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿದೆ.
Post a Comment