ಧಾರವಾಡ, ಜೂ.29: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026 ಅಂಗವಾಗಿ ಬೃಹತ್ ಜಾಗೃತಿ ಜಾಥಾವನ್ನು ಭಾನುವಾರ ಧಾರವಾಡದಲ್ಲಿ ಆಯೋಜಿಸಲಾಯಿತು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸ್ನೇಹಲ್ ಆರ್. ಮತ್ತು ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಭುವನೇಶ್ವರ ಪಾಟೀಲ ಅವರು ಆಕಾಶಕ್ಕೆ ಬಲೂನ್‌ಗಳನ್ನು ಹಾರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಗಿಡಕ್ಕೆ ನೀರುಣಿಸುವ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್., ದೋಷರಹಿತ ಹಾಗೂ ನಿಖರ ಮತದಾರರ ಪಟ್ಟಿ ಪ್ರಜಾಪ್ರಭುತ್ವದ ಬಲಿಷ್ಠ ಅಡಿಪಾಯವಾಗಿದೆ. ಪ್ರತಿಯೊಬ್ಬ ಅರ್ಹ ನಾಗರಿಕರು ಎನ್ಯುಮರೇಷನ್ ಫಾರ್ಮ್ ಅನ್ನು ತಪ್ಪದೇ ಭರ್ತಿ ಮಾಡಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಭುವನೇಶ್ವರ ಪಾಟೀಲ ಮಾತನಾಡಿ, ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ರಾಜಕೀಯ ಪಕ್ಷಗಳು, ಯುವ ಮತದಾರರು, ಬೂತ್ ಮಟ್ಟದ ಅಧಿಕಾರಿಗಳು, ಬಿಎಲ್‌ಒಗಳು ಹಾಗೂ ಸಾರ್ವಜನಿಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಜಾಗೃತಿ ಜಾಥಾವು ಪಾಲಿಕೆ ಆವರಣದಿಂದ ಆರಂಭವಾಗಿ ಮಹಾರಾಣಾ ಪ್ರತಾಪ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ, ಕೆಸಿಸಿ ಬ್ಯಾಂಕ್ ಮಾರ್ಗವಾಗಿ ಸಾಗಿದ್ದು, ಕಲಾಭವನ ಆವರಣದಲ್ಲಿ ಸಮಾರೋಪಗೊಂಡಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಮತದಾರರ ನೋಂದಣಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಸಹಾಯಕ ಅಧಿಕಾರಿಯಾದ ಉಮೇಶ ಸವಣೂರ, ಪಾಲಿಕೆಯ ವಲಯ ಆಯುಕ್ತರಾದ ಅರವಿಂದ ಜಮಖಂಡಿ, ಶಂಕರ ಪಾಟೀಲ, ರಮೇಶ್ ನ್ಯೂಲ್ವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಜಾಥಾದಲ್ಲಿ ನೂರಾರು ಸಿಬ್ಬಂದಿ, ಚುನಾವಣಾ ಕಾರ್ಯಕರ್ತರು, ಯುವ ಮತದಾರರು ಹಾಗೂ ಸಾರ್ವಜನಿಕರು ಭಾಗವಹಿಸಿ "ದೋಷಮುಕ್ತ ಮತದಾರರ ಪಟ್ಟಿ – ಬಲಿಷ್ಠ ಪ್ರಜಾಪ್ರಭುತ್ವ" ಎಂಬ ಸಂದೇಶವನ್ನು ಜನರಿಗೆ ತಲುಪಿಸಿದರು.
Post a Comment