ಧಾರವಾಡ: ಧಾರವಾಡ-71 ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಶಾಸಕ ವಿನಯ ಕುಲಕರ್ಣಿ ಅವರ ಅನರ್ಹತೆಯ ಹಿನ್ನೆಲೆಯಲ್ಲಿ ಹೈಕೋರ್ಟ್‌ನಿಂದ ಇನ್ನೂ ಮಧ್ಯಂತರ ತಡೆ ಸಿಗದಿರುವುದರಿಂದ, ಶೀಘ್ರದಲ್ಲೇ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸುವ ನಿರೀಕ್ಷೆಯಿದೆ. ಈ ಬೆಳವಣಿಗೆಯೊಂದಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ.
ಕಾಂಗ್ರೆಸ್‌ನಲ್ಲಿ ಪ್ರಬಲ ಪೈಪೋಟಿ
ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಪ್ರಮುಖ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಜಿಲ್ಲೆಗೆ ಪ್ರವೇಶಿಸಲು ಅವಕಾಶವಿಲ್ಲದ ಸಂದರ್ಭದಲ್ಲೂ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸಿ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸದ್ಯವೂ ಕ್ಷೇತ್ರದಲ್ಲಿ ಜನಸಂಪರ್ಕ ಮುಂದುವರಿಸಿರುವ ಶಿವಲೀಲಾ ಅವರಿಗೆ ಅನುಕಂಪದ ಅಲೆಯೂ ನೆರವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದೇ ವೇಳೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ತವನಪ್ಪ ಅಷ್ಟಗಿ ಕೂಡ ಟಿಕೆಟ್‌ಗಾಗಿ ಪಕ್ಷದ ವರಿಷ್ಠರ ಬಳಿ ಲಾಬಿ ನಡೆಸುತ್ತಿದ್ದಾರೆ.
ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳು
ಬಿಜೆಪಿಯಲ್ಲೂ ಟಿಕೆಟ್‌ಗಾಗಿ ಹಲವು ನಾಯಕರು ಪೈಪೋಟಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸೀಮಾ ಮಸೂತಿ ಹಾಗೂ ಸವಿತಾ ಅಮರಶೆಟ್ಟಿ ಅವರಿಗೆ ಅವಕಾಶ ನೀಡುವಂತೆ ಪಕ್ಷದ ನಾಯಕತ್ವದ ಮೇಲೆ ಒತ್ತಡ ಹೆಚ್ಚಿಸುತ್ತಿದ್ದಾರೆ.
ಇನ್ನೊಂದೆಡೆ, ಮಾಜಿ ಮೇಯರ್ ಈರೇಶ ಅಂಚಟಗೇರಿ ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರ ಬಲದ ಮೇಲೆ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕ ಅಮೃತ ದೇಸಾಯಿ ಹಾಗೂ ಶಶಿಮೌಳಿ ಕುಲಕರ್ಣಿ ಕೂಡ ಟಿಕೆಟ್ ರೇಸ್‌ನಲ್ಲಿ ಹೆಸರು ಕೇಳಿಬರುತ್ತಿದೆ.
ರಾಜಕೀಯ ಕಾವು ಹೆಚ್ಚಳ
ಉಪಚುನಾವಣೆ ಘೋಷಣೆಯಾದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿ ನಡೆಯುವ ಸಾಧ್ಯತೆ ಇದೆ. ಈ ಚುನಾವಣೆ ಕೇವಲ ಧಾರವಾಡ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೇ, 2028ರ ವಿಧಾನಸಭಾ ಚುನಾವಣೆಗೆ ಮುನ್ನ ಉತ್ತರ ಕರ್ನಾಟಕದ ರಾಜಕೀಯ ದಿಕ್ಕನ್ನು ನಿರ್ಧರಿಸುವ ಮಹತ್ವದ ಕದನವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ಜನರ ಅಭಿಪ್ರಾಯವೇನು?
ಧಾರವಾಡ ಉಪಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಗೆಲುವಿನ ಸಾಧ್ಯತೆ ಹೆಚ್ಚು ಎಂದು ನೀವು ಭಾವಿಸುತ್ತೀರಿ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.
Post a Comment