⚡ಟ್ರೆಂಡಿಂಗ್

ಧಾರವಾಡದ ನಾಗರಿಕರಿಗೆ ಮತ್ತೊಂದು ಸಿಹಿಸುದ್ದಿ: ನೂತನ ಆಧಾರ್ ಸೇವಾ ಕೇಂದ್ರ ಉದ್ಘಾಟನೆ


ಧಾರವಾಡ: ಸಾರ್ವಜನಿಕರಿಗೆ ಆಧಾರ್ ಸಂಬಂಧಿತ ಸೇವೆಗಳನ್ನು ಸುಲಭವಾಗಿ, ವೇಗವಾಗಿ ಮತ್ತು ಪಾರದರ್ಶಕವಾಗಿ ಒದಗಿಸುವ ಉದ್ದೇಶದಿಂದ ಧಾರವಾಡದಲ್ಲಿ ನೂತನ ಆಧಾರ್ ಸೇವಾ ಕೇಂದ್ರವನ್ನು ಉದ್ಘಾಟಿಸಲಾಯಿತು.

ಯುಐಡಿಎಐ (UIDAI) ಮತ್ತು ಪ್ರೋಟಿಯನ್ ಇ-ಗೌ ಟೆಕ್ನಾಲಜೀಸ್ ಲಿಮಿಟೆಡ್ ಸಹಯೋಗದಲ್ಲಿ ಸ್ಥಾಪಿಸಲಾದ ಈ ಕೇಂದ್ರದ ಮೂಲಕ ನಾಗರಿಕರಿಗೆ ಹೊಸ ಆಧಾರ್ ನೋಂದಣಿ, ವಿಳಾಸ ಬದಲಾವಣೆ, ಮೊಬೈಲ್ ಸಂಖ್ಯೆ ನವೀಕರಣ, ತಿದ್ದುಪಡಿ ಸೇರಿದಂತೆ ವಿವಿಧ ಆಧಾರ್ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗಲಿವೆ.

ಈ ಹಿಂದೆ ಧಾರವಾಡದ ಜನರು ಆಧಾರ್ ಸೇವೆಗಳಿಗಾಗಿ ಹುಬ್ಬಳ್ಳಿಗೆ ತೆರಳಬೇಕಾಗುತ್ತಿತ್ತು. ಇದರಿಂದ ಸಾರ್ವಜನಿಕರಿಗೆ ಆಗುತ್ತಿದ್ದ ಅನಾನುಕೂಲತೆ ಗಮನಿಸಿ ಧಾರವಾಡದಲ್ಲಿ ಪ್ರತ್ಯೇಕ ಆಧಾರ್ ಸೇವಾ ಕೇಂದ್ರ ಮರು ಪ್ರಾರಂಭಿಸುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವರಿಗೆ ಮನವಿ ಮಾಡಲಾಗಿತ್ತು. ಆ ಮನವಿಗೆ ಸ್ಪಂದಿಸಿ ಧಾರವಾಡದ ಜನರ ಅನುಕೂಲಕ್ಕಾಗಿ ಈ ಕೇಂದ್ರ ಆರಂಭಿಸಲಾಗಿದೆ.

ಕೇಂದ್ರ ಸರ್ಕಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಧಾರ್ ಸೇವಾ ಕೇಂದ್ರಗಳ ವಿಸ್ತರಣೆಗೆ ಕ್ರಮ ಕೈಗೊಂಡಿದ್ದು, ಜನರಿಗೆ ಸಮೀಪದಲ್ಲೇ ಡಿಜಿಟಲ್ ಗುರುತಿನ ಸೇವೆಗಳನ್ನು ಒದಗಿಸುವ ಗುರಿ ಹೊಂದಿದೆ. 17 ವರ್ಷದೊಳಗಿನ ಮಕ್ಕಳಿಗೆ ಉಚಿತ ಆಧಾರ್ ಸೇವೆ ನೀಡುವ ಸೌಲಭ್ಯವನ್ನೂ ಸಾರ್ವಜನಿಕರು ಬಳಸಿಕೊಳ್ಳಬಹುದು ಎಂದು ತಿಳಿಸಲಾಯಿತು.

ಈ ಕೇಂದ್ರದಿಂದ ಧಾರವಾಡ ಹಾಗೂ ಸುತ್ತಮುತ್ತಲಿನ ಲಕ್ಷಾಂತರ ನಾಗರಿಕರಿಗೆ ಪ್ರಯೋಜನವಾಗಲಿದ್ದು, ಆಧಾರ್ ಸಂಬಂಧಿತ ಕೆಲಸಗಳಿಗೆ ದೂರ ಪ್ರಯಾಣಿಸುವ ಅವಶ್ಯಕತೆ ಕಡಿಮೆಯಾಗಲಿದೆ.

ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಅರವಿಂದ ಬೆಲ್ಲದ್, ಮಾಜಿ ಶಾಸಕಿ ಶ್ರೀಮತಿ ಸೀಮಾ ಮಸೂತಿ, ಪಾಲಿಕೆ ಸದಸ್ಯ ಶ್ರೀ ಶಿವು ಮೆಣಸಿನಕಾಯಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಧಾರವಾಡ ಜನತೆಗೆ ಈ ಸೌಲಭ್ಯ ಒದಗಿಸಲು ಸಹಕಾರ ನೀಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ಸಲ್ಲಿಸಲಾಯಿತು.

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...