2 ಸಾವಿರ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ – ಅನಧಿಕೃತ ಪಿ.ಜಿ.ಗಳ ಮೇಲೆ ಹದ್ದಿನ ಕಣ್ಣು
ಧಾರವಾಡ: ವಿದ್ಯಾಕಾಶಿ ಎಂದೇ ಖ್ಯಾತಿ ಪಡೆದಿರುವ ಧಾರವಾಡ ನಗರವನ್ನು ಮತ್ತಷ್ಟು ವಿದ್ಯಾರ್ಥಿ ಸ್ನೇಹಿ ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ಹೆಜ್ಜೆ ಇಟ್ಟಿದೆ. ಸುಮಾರು 2 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನೂತನ ಹಾಸ್ಟೆಲ್ ನಿರ್ಮಾಣಕ್ಕೆ ಮುಂದಿನ ಮೂರು ತಿಂಗಳಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್. ರಾಯಮಾನೆ ತಿಳಿಸಿದರು.
ಧಾರವಾಡ ಜರ್ನಲಿಸ್ಟ್ ಗಿಲ್ಡ್ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬರುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಅಗತ್ಯವಿರುವಷ್ಟು ವಸತಿ ಸೌಲಭ್ಯಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ವಿದ್ಯಾನಗರ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಹಾಸ್ಟೆಲ್ ನಿರ್ಮಾಣಕ್ಕಾಗಿ ಧಾರವಾಡ ನಗರ ವ್ಯಾಪ್ತಿಯ ಮೂರ್ನಾಲ್ಕು ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸ್ಥಳ ಪರಿಶೀಲನೆಯೂ ನಡೆದಿದೆ. ಹೆಚ್ಚಿನ ಅನುದಾನಕ್ಕಾಗಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಅನಧಿಕೃತ ಪಿ.ಜಿ.ಗಳ ಮೇಲೆ ನಿಗಾ
ಧಾರವಾಡದಲ್ಲಿ ವೇಗವಾಗಿ ಹೆಚ್ಚುತ್ತಿರುವ ಪೇಯಿಂಗ್ ಗೆಸ್ಟ್ (ಪಿ.ಜಿ.) ಕೇಂದ್ರಗಳ ಮೇಲೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಗಾ ವಹಿಸಲಿದೆ. ನಗರದಲ್ಲಿ 2500ಕ್ಕೂ ಹೆಚ್ಚು ಪಿ.ಜಿ.ಗಳು ಕಾರ್ಯನಿರ್ವಹಿಸುತ್ತಿದ್ದು, ಕೆಲವು ಕಡೆ ಅಕ್ರಮ ಚಟುವಟಿಕೆಗಳ ವರದಿಗಳು ಬಂದಿವೆ. ಮುಂದಿನ ದಿನಗಳಲ್ಲಿ ಪಿ.ಜಿ.ಗಳ ನೋಂದಣಿ, ಸುರಕ್ಷತೆ ಹಾಗೂ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮಾಭಿವೃದ್ಧಿ, ಕೆರೆ ಸಂರಕ್ಷಣೆಗೆ ಒತ್ತು
ಜಿಲ್ಲೆಯಲ್ಲಿ 1250 ಕೆರೆಗಳಿದ್ದು, ಪ್ರತಿ ವರ್ಷ ಕನಿಷ್ಠ 10 ಕೆರೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ರೈತರಿಗೆ ಅನುಕೂಲವಾಗುವಂತೆ ‘ನಮ್ಮ ಹೊಲ ನಮ್ಮ ರಸ್ತೆ’ ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ. ದೊಡ್ಡ ಗ್ರಾಮಗಳಲ್ಲಿ ಒಳಚರಂಡಿ, ತ್ಯಾಜ್ಯ ನಿರ್ವಹಣೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ
ಧಾರವಾಡದ ಆಲ್ಫೋನ್ಸೋ ಮಾವನ್ನು ಆಧಾರವಾಗಿಟ್ಟುಕೊಂಡು ಕೃಷಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು. ಮಾವು ಮೇಳವನ್ನು 2027ರಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಯೋಜಿಸುವ ಚಿಂತನೆ ಇದೆ. ಸಾಧನಕೇರಿ ಅಭಿವೃದ್ಧಿ, ಗಂಗೂಬಾಯಿ ಹಾನಗಲ್ ಅವರ ಮನೆ ನವೀಕರಣ ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಶಾಲೆಗಳ ಅಭಿವೃದ್ಧಿಗೆ ಸಿಎಸ್ಆರ್ ಬಳಕೆ
ಜಿಲ್ಲೆಯ ಶಾಲೆಗಳ ಅಭಿವೃದ್ಧಿಗೆ ಸಿಎಸ್ಆರ್ ನಿಧಿ ಬಳಸಿಕೊಳ್ಳಲಾಗುವುದು. ಅಳ್ನಾವರ ಮತ್ತು ಅಣ್ಣಿಗೇರಿ ತಹಶೀಲ್ದಾರ್ ಕಚೇರಿಗಳ ಅಭಿವೃದ್ಧಿಗೆ ಅನುದಾನ ಲಭ್ಯವಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ. ಭೂ ಸಮೀಕ್ಷೆಗೆ ಸಂಬಂಧಿಸಿದ ಬಾಕಿ ಇರುವ 11,500 ಅರ್ಜಿಗಳ ಸಮಸ್ಯೆಗೂ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.
“ಧಾರವಾಡ ನನಗೆ ತವರು ಇದ್ದಂತೆ. ಇಲ್ಲಿಯೇ ಓದಿ, ಇಲ್ಲಿಯೇ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕೆಲಸ ಮಾಡಿದ್ದೇನೆ. ಇದೀಗ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತೇನೆ.”
— ಸ್ನೇಹಲ್ ರಾಯಮಾನೆ, ಜಿಲ್ಲಾಧಿಕಾರಿ, ಧಾರವಾಡ
ಕಾರ್ಯಕ್ರಮದಲ್ಲಿ ಧಾರವಾಡ ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಡಾ. ಬಸವರಾಜ ಹೊಂಗಲ್, ಕಾರ್ಯದರ್ಶಿ ನಿಜಗುಣಿ ದಿಂಡಲಕೊಪ್ಪ, ಉಪಾಧ್ಯಕ್ಷ ಬಸವರಾಜ ಅಳಗವಾಡಿ ಹಾಗೂ ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.
Post a Comment