ಕುಟುಂಬದೊಂದಿಗೆ ಸರಳ ಆಚರಣೆ – ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ
ವಿಶೇಷ ವರದಿ
ಕಿರುತೆರೆ ಹಾಗೂ ಬೆಳ್ಳಿತೆರೆಯ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿರುವ ಜನಪ್ರಿಯ ನಟ ರಿತ್ವಿಕ್ ಮಠದ ಅವರಿಗೆ ಇಂದು ಜನ್ಮದಿನದ ಸಂಭ್ರಮ. ತಮ್ಮ ಅದ್ಭುತ ಅಭಿನಯ, ಪರಿಶ್ರಮ ಹಾಗೂ ಸರಳ ಸ್ವಭಾವದಿಂದ ಅಪಾರ ಅಭಿಮಾನಿಗಳನ್ನು ಗಳಿಸಿರುವ ರಿತ್ವಿಕ್ ಅವರಿಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳ ಮಹಾಪೂರ ಹರಿದುಬರುತ್ತಿದೆ.
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ‘ಗಿಣಿರಾಮ’ ಧಾರಾವಾಹಿ ಮೂಲಕ ಜನಮನ ಗೆದ್ದ ರಿತ್ವಿಕ್ ಮಠದ, ತಮ್ಮ ಸಹಜ ಅಭಿನಯದ ಮೂಲಕ ಮನೆಮಾತಾದರು. ನಂತರ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ತಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಜನರಿಗೆ ತಲುಪಿಸಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು.
ಮೂಲತಃ ದಾವಣಗೆರೆ ಜಿಲ್ಲೆಯವರಾದ ರಿತ್ವಿಕ್ ಮಠದ ಅವರು ಇಂಜಿನಿಯರ್ ವೃತ್ತಿಯನ್ನು ಬಿಟ್ಟು ಬಣ್ಣದ ಜಗತ್ತಿನತ್ತ ಹೆಜ್ಜೆ ಇಟ್ಟವರು. ಸಾಕಷ್ಟು ಕಷ್ಟ-ಸವಾಲುಗಳನ್ನು ಎದುರಿಸಿ, ತಮ್ಮ ಪ್ರತಿಭೆ ಹಾಗೂ ಪರಿಶ್ರಮದ ಬಲದಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಇತ್ತೀಚೆಗೆ ‘ನಾಡಿ ಮಾರ್ನಮಿ’ ಚಿತ್ರದಲ್ಲಿ ಚೇತು ಪಾತ್ರದ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡು ಯಶಸ್ಸು ಸಾಧಿಸಿದ ರಿತ್ವಿಕ್, ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ. ಇದರ ಜೊತೆಗೆ ‘ಗಿಫ್ಟ್ ಬಾಕ್ಸ್’, ‘ಕಲ್ ಸಕ್ರೆ’, ‘ಆದೀನಗಳು’, ‘ಉತ್ಸವ’ ಸೇರಿದಂತೆ ಹಲವು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ತಮ್ಮ ಅಭಿನಯದ ಛಾಪು ಮೂಡಿಸಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ನಿನಗಾಗಿ’ ಧಾರಾವಾಹಿಯಲ್ಲಿಯೂ ರಿತ್ವಿಕ್ ಅವರ ಅಭಿನಯ ಪ್ರೇಕ್ಷಕರ ಮನಸ್ಸು ಗೆದ್ದಿದ್ದು, ಕಥೆಯ ರೋಚಕ ತಿರುವುಗಳೊಂದಿಗೆ ಅವರ ಪಾತ್ರ ವೀಕ್ಷಕರ ಗಮನ ಸೆಳೆದಿತ್ತು.
ನಟನೆಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ರಿತ್ವಿಕ್ ಮಠದ ಅವರು ಸದಾ ಮುಂಚೂಣಿಯಲ್ಲಿದ್ದಾರೆ. ತಮ್ಮ “ನಮ್ಮ ರಿತ್ವಿಕ್ ಮಠದ ಫೌಂಡೇಶನ್” ಮುಖಾಂತರ ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಅವರ ಮಾನವೀಯ ಕಾಳಜಿಗೆ ಸಾಕ್ಷಿಯಾಗಿದೆ.
ಅಷ್ಟೇ ಅಲ್ಲದೆ ಪ್ರಾಣಿ-ಪಕ್ಷಿಗಳ ಮೇಲಿನ ಅವರ ಪ್ರೀತಿ ಮತ್ತು ಕಾಳಜಿಯೂ ವಿಶೇಷವಾಗಿದ್ದು, ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುವ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.
ಈ ಬಾರಿಯ ಜನ್ಮದಿನವನ್ನು ರಿತ್ವಿಕ್ ಮಠದ ಅವರು ತಮ್ಮ ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ಸಂತೋಷದಿಂದ ಆಚರಿಸಿಕೊಂಡಿದ್ದಾರೆ. ಕುಟುಂಬದ ಪ್ರೀತಿ ಹಾಗೂ ಅಭಿಮಾನಿಗಳ ಆಶೀರ್ವಾದದ ನಡುವೆ ಅವರ ಹುಟ್ಟುಹಬ್ಬ ಮತ್ತಷ್ಟು ವಿಶೇಷವಾಗಿದೆ.
ಇಂಜಿನಿಯರ್ ಕೆಲಸದಿಂದ ಕಲಾರಂಗದವರೆಗೆ, ಕನಸಿನಿಂದ ಸಾಧನೆಯವರೆಗೆ ಸಾಗಿರುವ ರಿತ್ವಿಕ್ ಮಠದ ಅವರ ಪಯಣ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದೆ. ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಇನ್ನಷ್ಟು ಯಶಸ್ಸು ಕಾಣಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
– ನ್ಯೂ ವಿಜಯ ನ್ಯೂಸ್ ವಿಶೇಷ ವರದಿ
Post a Comment