ಬೆಂಗಳೂರು, ಜೂ.28: ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಚಪ್ಪಲಿ ಎಸೆದಿರುವ ಘಟನೆಗೆ ಕಾಂಗ್ರೆಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ವಾದ-ಪ್ರತಿವಾದಗಳ ಮೂಲಕ ಎದುರಿಸಲು ಸಾಧ್ಯವಾಗದವರು ಮಾತ್ರ ಇಂತಹ ಹೇಯ ಹಾಗೂ ಹೇಡಿತನದ ಕೃತ್ಯಗಳಿಗೆ ಇಳಿಯುತ್ತಾರೆ ಎಂದು ಆರೋಪಿಸಲಾಗಿದೆ.
ಭಿನ್ನಮತವನ್ನು ಹಿಂಸೆ, ಬೆದರಿಕೆ ಮತ್ತು ಅವಮಾನದಿಂದ ಹತ್ತಿಕ್ಕುವ ರಾಜಕೀಯ ಸಂಸ್ಕೃತಿಗೆ ಕರ್ನಾಟಕದಲ್ಲಿ ಯಾವುದೇ ಸ್ಥಾನವಿಲ್ಲ. ಜನರ ತೀರ್ಪಿಗೆ ಗೌರವ ನೀಡುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ದುಷ್ಕೃತ್ಯಗಳಿಗೆ ಯಾವುದೇ ಸಮರ್ಥನೆ ಇರಲಾರದು ಎಂದು ಹೇಳಿಕೆಯಲ್ಲಿ ಒತ್ತಿ ಹೇಳಲಾಗಿದೆ.
ಇದೇ ವೇಳೆ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಧೈರ್ಯ ತುಂಬಿರುವ ಕಾಂಗ್ರೆಸ್, "ನೀವು ಎದೆಗುಂದುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷ ನಿಮ್ಮೊಂದಿಗೆ ದೃಢವಾಗಿ ನಿಂತಿದೆ. ಸತ್ಯ, ಪ್ರಜಾಪ್ರಭುತ್ವ ಹಾಗೂ ಜನಪರ ಧ್ವನಿಯನ್ನು ಇಂತಹ ಕೃತ್ಯಗಳಿಂದ ಯಾರೂ ಮೌನಗೊಳಿಸಲು ಸಾಧ್ಯವಿಲ್ಲ" ಎಂದು ಬೆಂಬಲ ವ್ಯಕ್ತಪಡಿಸಿದೆ.
ಈ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕ ಜೀವನದಲ್ಲಿ ಪರಸ್ಪರ ಗೌರವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವಂತೆ ಹಲವು ನಾಯಕರು ಆಗ್ರಹಿಸಿದ್ದಾರೆ.
Post a Comment