⚡ಟ್ರೆಂಡಿಂಗ್

ನೂತನ ಹುಬ್ಬಳ್ಳಿ ಗ್ರಾಮೀಣ ಡಿವೈಎಸ್‌ಪಿ ಕಚೇರಿ ಆರಂಭಕ್ಕೆ ಸರ್ಕಾರದ ಆದೇಶ: ಜನರ ಬಹುದಿನದ ಬೇಡಿಕೆಗೆ ಸ್ಪಂದನೆ


ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಪೊಲೀಸ್ ಕಾರ್ಯಭಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೂತನ ಹುಬ್ಬಳ್ಳಿ ಗ್ರಾಮೀಣ ಡಿವೈಎಸ್‌ಪಿ (DySP) ಕಚೇರಿ ಪ್ರಾರಂಭಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ ಒಂದೇ ಪೊಲೀಸ್ ಉಪವಿಭಾಗ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಹಾಗೂ ಕಾನೂನು ಸುವ್ಯವಸ್ಥೆ ನಿರ್ವಹಣೆಯ ಒತ್ತಡದಿಂದ ಪ್ರತ್ಯೇಕ ಉಪವಿಭಾಗದ ಅಗತ್ಯತೆ ಎದುರಾಗಿತ್ತು. ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ವಿಶೇಷ ಪ್ರಕರಣವೆಂದು ಪರಿಗಣಿಸಿ ನೂತನ ಕಚೇರಿಗೆ ಅನುಮೋದನೆ ನೀಡಿದ್ದಾರೆ.

ದಿನಾಂಕ 26-05-2026 ರಂದು ಸರ್ಕಾರದಿಂದ ಈ ಸಂಬಂಧ ಆದೇಶ ಹೊರಡಿಸಲಾಗಿದೆ. ಧಾರವಾಡ ಜಿಲ್ಲೆ ವಿಭಜನೆಯ ನಂತರ ಇತ್ತೀಚಿನ ವರ್ಷಗಳಲ್ಲಿ ಘೋರ ಅಪರಾಧ, ಲಘು ಅಪರಾಧ ಪ್ರಕರಣಗಳು ಹೆಚ್ಚಾಗಿರುವುದರ ಜೊತೆಗೆ ಮಹದಾಯಿ, ಕಳಸಾ-ಬಂಡೂರಿ ಹೋರಾಟಗಳು ಹಾಗೂ ರೈತರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಚಳುವಳಿಗಳ ನಿರ್ವಹಣೆಗೆ ಹೆಚ್ಚಿನ ಪೊಲೀಸ್ ವ್ಯವಸ್ಥೆಯ ಅಗತ್ಯವಿತ್ತು.

ನೂತನ ಹುಬ್ಬಳ್ಳಿ ಗ್ರಾಮೀಣ ಡಿವೈಎಸ್‌ಪಿ ಕಚೇರಿಯ ವ್ಯಾಪ್ತಿಗೆ ಹುಬ್ಬಳ್ಳಿ ಗ್ರಾಮೀಣ, ನವಲಗುಂದ, ಅಣ್ಣಿಗೇರಿ, ಕುಂದಗೋಳ ಹಾಗೂ ಗುಡಗೇರಿ ಪೊಲೀಸ್ ಠಾಣೆಗಳು ಒಳಪಡಲಿವೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ನೀಡಿದ್ದ ಭರವಸೆಯಂತೆ ಇದೀಗ ಸರ್ಕಾರ ಆದೇಶ ಹೊರಡಿಸಿದ್ದು, ಈ ನಿರ್ಧಾರದಿಂದ ಗ್ರಾಮೀಣ ಭಾಗದ ಜನರಿಗೆ ತ್ವರಿತ ಪೊಲೀಸ್ ಸೇವೆ ದೊರೆಯುವ ನಿರೀಕ್ಷೆಯಿದೆ.

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...