ಬೆಂಗಳೂರು: ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ, ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ಸಮಿತಿಯ ನಿಯೋಗವು ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಭೇಟಿಯ ಸಂದರ್ಭದಲ್ಲಿ ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಯ ಅಗತ್ಯತೆ, ಆಡಳಿತಾತ್ಮಕ ಅನುಕೂಲತೆ ಹಾಗೂ ನಗರದ ಸಮಗ್ರ ಅಭಿವೃದ್ಧಿಗೆ ಇದರಿಂದಾಗುವ ಮಹತ್ವದ ಕುರಿತು ನಿಯೋಗದ ಸದಸ್ಯರು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ನಿಯೋಗದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಹಾಲಿ ಮಹಾನಗರ ಪಾಲಿಕೆ ಸದಸ್ಯರ ಅಧಿಕಾರಾವಧಿಯನ್ನು ಪರಿಗಣಿಸಿ, ಏಪ್ರಿಲ್ 2027ರಿಂದ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲು ಟಿಪ್ಪಣಿ ಬರೆದು ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿದರು ಎಂದು ತಿಳಿದುಬಂದಿದೆ.
ಇದೇ ವೇಳೆ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಜಾರಿಗೆ ಸಂಬಂಧಿಸಿದ ಅಂತಿಮ ಅಧಿಸೂಚನೆಗೆ ಸಹಿ ಹಾಕಲಾಗಿದೆ ಎಂದು ನಿಯೋಗದವರು ತಿಳಿಸಿದ್ದಾರೆ.
ಬಳಿಕ ನಿಯೋಗದ ಸದಸ್ಯರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಿ.ಡಿ. ಹಿರೇಮಠ್, ವೆಂಕಟೇಶ್ ಮಾಚಕನೂರ್, ಜಿಲ್ಲಾಧ್ಯಕ್ಷೆ ಗೌರಮ್ಮ ಬಲೋಗಿ, ವಿಠ್ಠಲ ಕಮ್ಮಾರ, ಶಂಕರ್ ನೀರಾವರಿ, ದಾನಪ್ಪ ಕಬ್ಬೇರ್, ರಾಜು ಕಮತಿ, ಗುರುರಾಜ ಹುಣಶಿಮರದ, ರವಿ ಮಳಗೇರ, ದೇವಿಕಾ ಹುಬ್ಬಳ್ಳಿ, ವೀರಣ್ಣ ಶೆಟ್ಟರ್, ಶಕೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Post a Comment