ಯುವಕರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಲು ಅಧಿಕಾರಿಗಳಿಗೆ ಸೂಚನೆ
ಧಾರವಾಡ, ಜೂನ್ 24:
ಬೆಳಗಾವಿ ವಿಭಾಗ ಮಟ್ಟದ ಉದ್ಯೋಗ ಮೇಳ ಆಯೋಜಿಸುವ ಕುರಿತು ಚರ್ಚೆ ನಡೆಯುತ್ತಿದ್ದು, ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದ ಬಳಿಕ ಶೀಘ್ರದಲ್ಲೇ ಉದ್ಯೋಗ ಮೇಳ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಹೇಳಿದರು.
ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೌಶಲ್ಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ನಗರಗಳು ಕೈಗಾರಿಕಾ ಹಾಗೂ ಶೈಕ್ಷಣಿಕ ಕೇಂದ್ರಗಳಾಗಿವೆ. ಇಲ್ಲಿ ಸಾಕಷ್ಟು ಕೈಗಾರಿಕೆಗಳಿದ್ದು, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು ಅತ್ಯಂತ ಮುಖ್ಯವಾಗಿದೆ ಎಂದರು.
ಅರ್ಹ ಅಭ್ಯರ್ಥಿಗಳು ಉದ್ಯೋಗ ಸಿಗದೇ ನಿರಾಶರಾಗಬಾರದು. ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ಸಜ್ಜುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮುಂದಿನ ದಿನಗಳಲ್ಲಿ ಕೈಗಾರಿಕೋದ್ಯಮಿಗಳ ಸಭೆ ನಡೆಸಲಾಗುವುದು. ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲ್ಯಗಳ ಕುರಿತು ಅಭ್ಯರ್ಥಿಗಳಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕು. ಹೊಸ ಅಭ್ಯರ್ಥಿಗಳಿಗೆ ಕೆಲಸಕ್ಕೆ ಅನುಗುಣವಾದ ವೇತನ ಸಿಗಬೇಕು. ಜೊತೆಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಐಟಿಐ ವಿದ್ಯಾರ್ಹತೆ ಹೊಂದಿದವರಿಗೆ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಾಗುತ್ತಿವೆ. ಪದವೀಧರರಿಗೂ ಹೆಚ್ಚಿನ ಉದ್ಯೋಗ ಸಿಗುವಂತೆ ಕ್ರಮ ವಹಿಸಬೇಕು. ಫ್ಯೂಚರ್ ಸ್ಕಿಲ್ ಯೋಜನೆಯ ಕುರಿತು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಕೌಶಲ್ಯ ತರಬೇತಿ ಹಾಗೂ ವಿವಿಧ ಯೋಜನೆಗಳ ಸಾಧನೆಯ ವರದಿಯನ್ನು ಸಿದ್ಧಪಡಿಸಬೇಕು. ಪಾರಂಪರಿಕ ಹಾಗೂ ಪ್ರಾದೇಶಿಕ ಕಲೆಗಳು ನಶಿಸದಂತೆ ಸಂರಕ್ಷಿಸುವ ಕೆಲಸವಾಗಬೇಕು. “ನನ್ನ ವೃತ್ತಿ ನನ್ನ ಆಯ್ಕೆ” ಹಾಗೂ “ಕಲಿಕೆಯೊಂದಿಗೆ ಕೌಶಲ್ಯ” ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ನಲ್ ಜಲ್ ಮಿತ್ರ ಯೋಜನೆಯಡಿ ತರಬೇತಿ ಪಡೆದವರು ಸ್ವಾವಲಂಬಿ ಜೀವನ ನಡೆಸುವಂತಾಗಬೇಕು ಎಂದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಉದ್ಯೋಗ ಆಧಾರಿತ ತರಬೇತಿ ನೀಡುವುದು ಅವಶ್ಯಕವಾಗಿದೆ. ತರಬೇತಿಯೊಂದಿಗೆ ಗೌರವ ಸಂಭಾವನೆ ನೀಡುವ ವ್ಯವಸ್ಥೆಯೂ ಇರಬೇಕು. ಧಾರವಾಡದಲ್ಲಿ ಅನೇಕ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ನವಲಗುಂದದ ಅಭಿಯಾನ ಫೌಂಡೇಶನ್ ಯೋಗ ಮ್ಯಾಟ್ ತಯಾರಿಕೆ ತರಬೇತಿ ನೀಡಲು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಲ್ ಜಲ್ ಮಿತ್ರ ಯೋಜನೆಯಡಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ, ಟೂಲ್ ಕಿಟ್ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ದ್ಯಾಬೇರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
Post a Comment