ಹೊಸದಿಲ್ಲಿ, ಜೂನ್ 24: ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣಕ್ಕೆ ತನ್ನ ಆರು ಲೋಕಸಭಾ ಸಂಸದರು ಸೇರ್ಪಡೆಯಾದ ಬೆಳವಣಿಗೆಯ ನಂತರ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಂಸತ್ ಭವನ ಸಂಕೀರ್ಣದಲ್ಲಿ ಪಕ್ಷಕ್ಕೆ ಮಂಜೂರಾಗಿದ್ದ ಪ್ರತ್ಯೇಕ ಕಚೇರಿ ಸ್ಥಳ ಕಳೆದುಕೊಳ್ಳುವ ಸಾಧ್ಯತೆ ಎದುರಾಗಿದೆ.
ಮೂಲಗಳ ಪ್ರಕಾರ, ಲೋಕಸಭಾ ಸ್ಪೀಕರ್ ಆರು ಬಂಡಾಯ ಸಂಸದರ ವಿಲೀನಕ್ಕೆ ಅಧಿಕೃತ ಮಾನ್ಯತೆ ನೀಡಿದರೆ, ಶಿವಸೇನೆ (ಯುಬಿಟಿ) ಸಂಸತ್ತಿನಲ್ಲಿ ಕೇವಲ ನಾಲ್ಕು ಸಂಸದರನ್ನು ಮಾತ್ರ ಹೊಂದಲಿದೆ. ಇದರಲ್ಲಿ ಲೋಕಸಭೆಯ ಮೂವರು ಹಾಗೂ ರಾಜ್ಯಸಭೆಯ ಒಬ್ಬ ಸಂಸದ ಸೇರಿದ್ದಾರೆ.
ಸಂಸದೀಯ ನಿಯಮಗಳ ಪ್ರಕಾರ ಸಂಸತ್ ಭವನ ಸಂಕೀರ್ಣದಲ್ಲಿ ಪ್ರತ್ಯೇಕ ಪಕ್ಷದ ಕಚೇರಿ ಪಡೆಯಲು ಕನಿಷ್ಠ ಐದು ಸಂಸದರನ್ನು ಹೊಂದಿರುವುದು ಅಗತ್ಯವಾಗಿರುತ್ತದೆ. ಹೀಗಾಗಿ ಸಂಸದೀಯ ಬಲ ಕುಸಿದರೆ ಉದ್ಧವ್ ಠಾಕ್ರೆ ಬಣ ತನ್ನ ಕಚೇರಿ ಉಳಿಸಿಕೊಳ್ಳುವ ಬಗ್ಗೆ ಅನಿಶ್ಚಿತತೆ ಎದುರಿಸಬೇಕಾಗಬಹುದು.
ಪ್ರಸ್ತುತ ಶಿವಸೇನೆ (ಯುಬಿಟಿ) ಸಂಸದೀಯ ಪಕ್ಷದ ಕಚೇರಿ ಸಂವಿಧಾನ ಸದನದ (ಹಳೆಯ ಸಂಸತ್ ಭವನ) ಕೊಠಡಿ ಸಂಖ್ಯೆ 128ಎರಲ್ಲಿ ಕಾರ್ಯನಿರ್ವಹಿಸುತ್ತಿದೆ. 2022ರಲ್ಲಿ ಶಿವಸೇನೆ ವಿಭಜನೆಯಾಗುವ ಮೊದಲು ಅವಿಭಜಿತ ಪಕ್ಷಕ್ಕೆ ನೀಡಲಾಗಿದ್ದ ಕೊಠಡಿ ಸಂಖ್ಯೆ 128ರ ಪಕ್ಕದಲ್ಲೇ ಈ ಕಚೇರಿ ಇದೆ.
2023ರ ಫೆಬ್ರವರಿಯಲ್ಲಿ ಚುನಾವಣಾ ಆಯೋಗವು ಏಕನಾಥ್ ಶಿಂಧೆ ಬಣವನ್ನು ಅಧಿಕೃತ ಶಿವಸೇನೆ ಎಂದು ಮಾನ್ಯ ಮಾಡಿದ ಬಳಿಕ ಕೊಠಡಿ ಸಂಖ್ಯೆ 128 ಶಿಂಧೆ ಬಣಕ್ಕೆ ಹಂಚಿಕೆಯಾಗಿತ್ತು. ಬಳಿಕ ಉದ್ಧವ್ ಬಣಕ್ಕೆ 128ಎ ಕೊಠಡಿಯಲ್ಲಿ ಅವಕಾಶ ನೀಡಲಾಗಿತ್ತು.
ಕಚೇರಿ ಕಳೆದುಕೊಳ್ಳುವ ಆತಂಕದ ಜೊತೆಗೆ ಸಂಸತ್ತಿನಲ್ಲಿ ಕಡಿಮೆಯಾಗುವ ಸಂಖ್ಯಾಬಲವು ರಾಷ್ಟ್ರೀಯ ಮಟ್ಟದ ರಾಜಕೀಯ ಚರ್ಚೆ ಹಾಗೂ ಸರ್ವಪಕ್ಷ ಸಭೆಗಳಲ್ಲಿ ಶಿವಸೇನೆ (ಯುಬಿಟಿ) ಪ್ರಭಾವದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಸದ್ಯ ಎಲ್ಲರ ಗಮನ ಲೋಕಸಭಾ ಸ್ಪೀಕರ್ ಕೈಗೊಳ್ಳಲಿರುವ ನಿರ್ಧಾರದತ್ತ ನೆಟ್ಟಿದ್ದು, ಆ ನಿರ್ಧಾರ ಉದ್ಧವ್ ಠಾಕ್ರೆ ಬಣದ ಸಂಸದೀಯ ಸ್ಥಾನಮಾನದ ಮೇಲೆ ಮಹತ್ವದ ಪರಿಣಾಮ ಬೀರುವ ನಿರೀಕ್ಷೆಯಿದೆ.
Post a Comment