ವಿಜಯಪುರ: ಜಿ
ಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ನಡೆಸಿದ್ದ ಆರೋಪಿಯನ್ನು ವಿಜಯಪುರ ಸಿಇಎನ್ (CEN) ಅಪರಾಧ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಯನ್ನು ಹಣಮಂತ ಭಜಂತ್ರಿ ಎಂದು ಗುರುತಿಸಲಾಗಿದೆ. ಸುರೇಶ ಅಥಣಿ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಮಾಹಿತಿ ನೀಡಿದ್ದು, ಆರೋಪಿ ತನ್ನ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದನು. ಆ ಖಾತೆಯ ಮೂಲಕ ಲೋಕೋಪಯೋಗಿ ಇಲಾಖೆ (PWD)ಯಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದನು ಎಂದು ತಿಳಿಸಿದ್ದಾರೆ.
ನಕಲಿ ಖಾತೆಯನ್ನು ನಿಜವೆಂದು ನಂಬಿದ ಸುರೇಶ ಅಥಣಿ ಅವರು ಹಂತ ಹಂತವಾಗಿ ಒಟ್ಟು ₹5 ಲಕ್ಷ 4 ಸಾವಿರ ಹಣವನ್ನು ಆರೋಪಿಗೆ ನೀಡಿದ್ದರು. ಆದರೆ ಹಣ ಪಡೆದ ಬಳಿಕ ಉದ್ಯೋಗ ಕೊಡಿಸದೆ ಹಾಗೂ ಹಣ ಮರಳಿ ನೀಡದೆ ವಂಚಿಸಿದ್ದಾನೆ ಎನ್ನಲಾಗಿದೆ.
ದೂರು ದಾಖಲಾದ ಬಳಿಕ ಕಾರ್ಯಾಚರಣೆ ನಡೆಸಿದ ಸಿಇಎನ್ ಠಾಣೆಯ ಪೊಲೀಸರು ಆರೋಪಿ ಹಣಮಂತ ಭಜಂತ್ರಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು, “ಸಾಮಾಜಿಕ ಜಾಲತಾಣಗಳಲ್ಲಿ ಬರುವ ನಕಲಿ ಸಂದೇಶಗಳು ಹಾಗೂ ಸರ್ಕಾರಿ ಉದ್ಯೋಗ ಕೊಡಿಸುವ ಆಮಿಷಗಳನ್ನು ನಂಬಿ ಹಣ ನೀಡಬೇಡಿ. ಇಂತಹ ವಂಚಕರ ಬಗ್ಗೆ ಎಚ್ಚರಿಕೆಯಿಂದಿರಿ” ಎಂದು ಮನವಿ ಮಾಡಿದ್ದಾರೆ.
ನ್ಯೂ ವಿಜಯ ನ್ಯೂಸ್ | ವಿಜಯಪುರ
Post a Comment