⚡ಟ್ರೆಂಡಿಂಗ್

ಹು-ಧಾ ಪಾಲಿಕೆ: ಜುಲೈ 4ರಂದು ನೂತನ ಮೇಯರ್, ಉಪಮೇಯರ್ ಚುನಾವಣೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪ್ರಸ್ತುತ ಮೇಯರ್ ಹಾಗೂ ಉಪಮೇಯರ್ ಅವರ ಅಧಿಕಾರಾವಧಿ ಈ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು, ನೂತನ ಮೇಯರ್ ಮತ್ತು ಉಪಮೇಯರ್ ಆಯ್ಕೆಗಾಗಿ ಜುಲೈ 4ರಂದು ಚುನಾವಣೆ ನಡೆಯಲಿದೆ.

ಈ ಬಾರಿ ಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿ (ಎಸ್‌ಸಿ) ಮಹಿಳೆಗೆ ಹಾಗೂ ಉಪಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ. ಪರಿಣಾಮ, ಮುಂಬರುವ ಅವಧಿಯಲ್ಲಿ ಪಾಲಿಕೆಯ ಉನ್ನತ ಆಡಳಿತ ಸಂಪೂರ್ಣವಾಗಿ ಮಹಿಳಾ ಜನಪ್ರತಿನಿಧಿಗಳ ಕೈಯಲ್ಲಿರಲಿದೆ.

ಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ಎಸ್‌ಸಿ ಮಹಿಳಾ ಸದಸ್ಯರಿಲ್ಲದ ಕಾರಣ, ಪಕ್ಷೇತರರಾಗಿ ಗೆದ್ದು ಬಿಜೆಪಿಗೆ ಬೆಂಬಲ ನೀಡಿರುವ ಚಂದ್ರಿಕಾ ಮೇಸ್ತ್ರಿ ಹಾಗೂ ದುರ್ಗಮ್ಮ ಬಿಜವಾಡ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ದುರ್ಗಮ್ಮ ಬಿಜವಾಡ ಈ ಹಿಂದೆ ಉಪಮೇಯರ್ ಆಗಿ ಕಾರ್ಯನಿರ್ವಹಿಸಿರುವ ಹಿನ್ನೆಲೆ, ಈ ಬಾರಿ ಚಂದ್ರಿಕಾ ಮೇಸ್ತ್ರಿ ಅವರಿಗೆ ಮೇಲುಗೈ ದೊರೆಯುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಇನ್ನು ಉಪಮೇಯರ್ ಸ್ಥಾನಕ್ಕೆ ಬಿಜೆಪಿ ವಲಯದಲ್ಲಿ ಅನಿತಾ ಚಳಗೇರಿ, ರತ್ನಾಬಾಯಿ ನಾಜರೆ, ಚಂದ್ರಕಲಾ ಕೊಟವಾಗಿ ಹಾಗೂ ಸುನೀತಾ ಮಾಳವದಕರ ಅವರು ಆಕಾಂಕ್ಷಿಗಳಾಗಿದ್ದಾರೆ.

ಪಕ್ಷದ ನಾಯಕತ್ವ ಯಾರಿಗೆ ಅವಕಾಶ ನೀಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಪಾಲಿಕೆಯ ಒಟ್ಟು 82 ಸದಸ್ಯರ ಬಲಾಬಲದಲ್ಲಿ ಬಿಜೆಪಿ 39 ಸದಸ್ಯರನ್ನು ಹೊಂದಿದ್ದು, ಮೂರು ಪಕ್ಷೇತರರ ಬೆಂಬಲವೂ ಇದೆ. ಕಾಂಗ್ರೆಸ್ 33 ಸದಸ್ಯರನ್ನು ಹೊಂದಿದ್ದರೆ, ಆರು ಪಕ್ಷೇತರರು, ಎಐಎಂಐಎಂ ಮೂರು ಹಾಗೂ ಜೆಡಿಎಸ್ ಒಬ್ಬ ಸದಸ್ಯರನ್ನು ಹೊಂದಿವೆ. ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ಆಡಳಿತವನ್ನು ಮುಂದುವರಿಸುವ ಸಾಧ್ಯತೆ ಹೆಚ್ಚಾಗಿದೆ.

ಜುಲೈ 4ರಂದು ನಡೆಯಲಿರುವ ಚುನಾವಣೆ ಪಾಲಿಕೆಯ ಮುಂದಿನ ಆಡಳಿತದ ದಿಕ್ಕನ್ನು ನಿರ್ಧರಿಸಲಿದ್ದು, ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಯಾರಿಗೆ ಅವಕಾಶ ಸಿಗಲಿದೆ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ.

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...