ಧಾರವಾಡ, ಮೇ 31 (ನ್ಯೂ ವಿಜಯ ನ್ಯೂಸ್): ತೀವ್ರ ಬಿಸಿಲಿನ ತಾಪದಿಂದ ತಣ್ಣಗಾಗಲು ಕೆರೆಗೆ ಈಜಲು ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಧಾರವಾಡ ತಾಲೂಕಿನ ಸಿಂಗನಳ್ಳಿ ಗ್ರಾಮದ ಸಮೀಪದ ಕರೆಮ್ಮನಕೆರೆಯಲ್ಲಿ ಶನಿವಾರ ಸಂಭವಿಸಿದೆ.
ಮೃತ ಬಾಲಕರನ್ನು ಸಿಂಗನಳ್ಳಿ ಗ್ರಾಮದ ನಿವಾಸಿಗಳಾದ ಅನ್ವರ ಇಬ್ರಾಹಿಂ ವಟ್ನಾಳ (13), ಸುಭಾನಿ ಇಸಾಕ್ ಬಾಗಜಿಕೊಪ್ಪ (12) ಹಾಗೂ ಮೆಹಬೂಬಸುಭಾನಿ ದಾದಾಫೀರ ವಟ್ನಾಳ (15) ಎಂದು ಗುರುತಿಸಲಾಗಿದೆ.
ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಮೂವರು ಬಾಲಕರು ಮಧ್ಯಾಹ್ನ ವೇಳೆ ಕರೆಮ್ಮನಕೆರೆಗೆ ಈಜಲು ತೆರಳಿದ್ದರು. ಈ ವೇಳೆ ಕೆರೆಯ ಆಳದ ಬಗ್ಗೆ ಸಮರ್ಪಕ ಅರಿವಿಲ್ಲದೆ ನೀರಿನಲ್ಲಿ ಇಳಿದಿದ್ದು, ಮುಳುಗತೊಡಗಿದ್ದಾರೆ. ಒಬ್ಬರನ್ನೊಬ್ಬರು ರಕ್ಷಿಸಲು ಪ್ರಯತ್ನಿಸಿದಾಗ ಮೂವರೂ ನೀರಿನಲ್ಲಿ ಸಿಲುಕಿ ದುರ್ಮರಣ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಸಂಜೆಯಾದರೂ ಬಾಲಕರು ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ಆರಂಭಿಸಿದರು. ಬಳಿಕ ಕೆರೆಯಲ್ಲಿ ಬಾಲಕರ ಮೃತದೇಹಗಳು ಪತ್ತೆಯಾಗಿದ್ದು, ಈ ಘಟನೆ ಗ್ರಾಮಸ್ಥರಲ್ಲಿ ಆಘಾತ ಮೂಡಿಸಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಬಾಲಕರ ಅಕಾಲಿಕ ನಿಧನದಿಂದ ಸಿಂಗನಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.
ನೀರಿನ ಆಳ ಹಾಗೂ ಅಪಾಯದ ಬಗ್ಗೆ ಅರಿವು ಇಲ್ಲದೆ ಮಕ್ಕಳು ಮತ್ತು ಯುವಕರು ಕೆರೆ, ಕಲ್ಲುಗಣಿ, ಜಲಾಶಯಗಳಲ್ಲಿ ಈಜಲು ಇಳಿಯುವುದು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
– ನ್ಯೂ ವಿಜಯ ನ್ಯೂಸ್
Post a Comment