ಉಪ್ಪಿನಬೆಟಗೇರಿ/ಕರಡಿಗುಡ್ಡ, ಜು.11: ಭಾರತೀಯ ಸೇನೆಗೆ ಅಗ್ನಿವೀರರಾಗಿ ಆಯ್ಕೆಯಾಗಿರುವ ಧಾರವಾಡ ತಾಲ್ಲೂಕಿನ ಕರಡಿಗುಡ್ಡ ಗ್ರಾಮದ ನಾಲ್ವರು ಯುವಕರಿಗೆ ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಪರಿವರ್ತನಾ ಟ್ರಸ್ಟ್ ವತಿಯಿಂದ ಭವ್ಯ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು.
ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿರುವ ನಾಗನಗೌಡ ಗೌಡ್ರ, ಸುನೀಲಗೌಡ ಕಬ್ಬೂರ, ಫಕ್ಕೀರಪ್ಪ ಕುರುಬರ ಹಾಗೂ ಉಮೇಶ ಕುರಗುಂದ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಗ್ರಾಮಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದ ಯುವಕರ ಸಾಧನೆಯನ್ನು ಕಾರ್ಯಕ್ರಮದಲ್ಲಿ ಶ್ಲಾಘಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರಡಿಗುಡ್ಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತನ್ವೀರ.ಡಿ., ಯುವಜನರು ದೇಶ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಜೀವನದಲ್ಲಿ ಯಶಸ್ಸು ಸಾಧಿಸಲು ಶಿಸ್ತು, ಸಮಯ ಪ್ರಜ್ಞೆ ಮತ್ತು ನಿರಂತರ ಪರಿಶ್ರಮ ಅತ್ಯಂತ ಅಗತ್ಯವಾಗಿದ್ದು, ಇವುಗಳನ್ನು ಪ್ರತಿಯೊಬ್ಬ ಯುವಕ-ಯುವತಿಯೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಉಪಪ್ರಾಂಶುಪಾಲ ಉಮಾಕಾಂತ ಕರ್ಚಕಟ್ಟಿ, ಪಂಚಾಯಿತಿ ಕಾರ್ಯದರ್ಶಿ ಮಡಿವಾಳಪ್ಪ ಹೂಲಿ, ಗ್ರಾಮ ಪರಿವರ್ತನಾ ಟ್ರಸ್ಟ್‌ನ ಶಿವಪ್ಪ ಕುರಗುಂದ, ಶಂಕರೆಪ್ಪ ಬಾಚಗುಂಡಿ ಸೇರಿದಂತೆ ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವು ದೇಶ ಸೇವೆಗೆ ಮುಂದಾಗಿರುವ ಯುವಕರಿಗೆ ಪ್ರೋತ್ಸಾಹ ನೀಡುವ ಜೊತೆಗೆ ಇತರ ವಿದ್ಯಾರ್ಥಿಗಳಲ್ಲಿಯೂ ದೇಶಭಕ್ತಿ ಮತ್ತು ಸೇವಾ ಮನೋಭಾವವನ್ನು ಬೆಳೆಸುವಲ್ಲಿ ಸ್ಫೂರ್ತಿದಾಯಕವಾಗಿತ್ತು.
Post a Comment