ಬೆಂಗಳೂರು, ಜು.18: ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚನ್ನಮ್ಮ ದೇವೇಗೌಡ ಅವರು ಇಂದು ಬೆಂಗಳೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚನ್ನಮ್ಮ ಅವರನ್ನು ಜುಲೈ 15ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರಾದ ಡಾ. ಸತ್ಯನಾರಾಯಣ ಅವರ ನೇತೃತ್ವದ ವೈದ್ಯಕೀಯ ತಂಡ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಇಂದು (ಜುಲೈ 18) ಕೊನೆಯುಸಿರೆಳೆದರು.
ಹಾಸನ ಜಿಲ್ಲೆಯ ಮುತ್ತಿಗೆ ಹಿರೇಹಳ್ಳಿ ಗ್ರಾಮದ ಮೂಲದವರಾದ ಚನ್ನಮ್ಮ ಅವರು, 1954ರ ಮೇ 25ರಂದು ಹೆಚ್.ಡಿ. ದೇವೇಗೌಡ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದರು. ದೇವೇಗೌಡರ ಸುದೀರ್ಘ ರಾಜಕೀಯ ಪಯಣದಲ್ಲಿ ಕುಟುಂಬದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಅವರ ಯಶಸ್ಸಿನ ಹಿಂದೆ ಮೌನ ಶಕ್ತಿಯಾಗಿ ನಿಂತಿದ್ದರು.
ಹೆಚ್.ಡಿ. ರೇವಣ್ಣ, ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ನಾಲ್ವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ತಾಯಿಯಾಗಿದ್ದ ಚನ್ನಮ್ಮ ಅವರು, ಕುಟುಂಬದ ಶಿಕ್ಷಣ, ಸಂಸ್ಕಾರ ಹಾಗೂ ಮೌಲ್ಯಗಳ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದರು. ದೇವೇಗೌಡರು ರಾಜಕೀಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ಇಡೀ ಕುಟುಂಬದ ಹೊಣೆ ಹೊತ್ತು ಆದರ್ಶ ಗೃಹಿಣಿಯಾಗಿ ಗುರುತಿಸಿಕೊಂಡಿದ್ದರು.
2001ರ ಫೆಬ್ರವರಿಯಲ್ಲಿ ಹರದನಹಳ್ಳಿ ದೇವಾಲಯದಲ್ಲಿ ಪೂಜೆ ಮುಗಿಸಿ ಹಿಂದಿರುಗುವ ವೇಳೆ ಅವರ ಮೇಲೆ ನಡೆದಿದ್ದ ಆ್ಯಸಿಡ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ, ಧೈರ್ಯದಿಂದ ಚೇತರಿಸಿಕೊಂಡು ಬದುಕಿನ ಹೋರಾಟವನ್ನು ಮುಂದುವರಿಸಿದ್ದರು.
ಚನ್ನಮ್ಮ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜಕೀಯ ನಾಯಕರು, ವಿವಿಧ ಪಕ್ಷಗಳ ಮುಖಂಡರು, ಗಣ್ಯರು ಹಾಗೂ ಜೆಡಿಎಸ್ ಕಾರ್ಯಕರ್ತರು ತೀವ್ರ ಸಂತಾಪ ಸೂಚಿಸಿದ್ದಾರೆ. ಅವರ ಅಗಲಿಕೆಯಿಂದ ದೇವೇಗೌಡರ ಕುಟುಂಬಕ್ಕೆ ಮಾತ್ರವಲ್ಲದೆ ರಾಜ್ಯದ ರಾಜಕೀಯ ವಲಯಕ್ಕೂ ಅಪಾರ ನಷ್ಟ ಉಂಟಾಗಿದೆ.
Post a Comment