⚡ಟ್ರೆಂಡಿಂಗ್

ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಆರಂಭ: ನದಿ ತೀರದ ಜನರಿಗೆ ಎಚ್ಚರಿಕೆ

ವಿಜಯಪುರ, ಜು.18: ನಾರಾಯಣಪುರ ಜಲಾಶಯದ ಕಾನೂನುಬದ್ಧ ಅಗತ್ಯಗಳನ್ನು ಪರಿಗಣಿಸಿ, ಆಲಮಟ್ಟಿ ಜಲಾಶಯದಿಂದ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಕೃಷ್ಣಾ ನದಿಗೆ 2,500 ಕ್ಯೂಸೆಕ್ ನೀರು ಬಿಡುಗಡೆ ಆರಂಭಿಸಲಾಗಿದೆ. ಮುಂದಿನ ಹಂತಗಳಲ್ಲಿ ನೀರಿನ ಹರಿವನ್ನು 12,000 ಕ್ಯೂಸೆಕ್‌ವರೆಗೆ ಹೆಚ್ಚಿಸಲಾಗುವುದು ಎಂದು ಜಲಾಶಯ ಆಡಳಿತ ತಿಳಿಸಿದೆ.

ನೀರು ಬಿಡುಗಡೆ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯದ ಕೆಳಭಾಗದಲ್ಲಿರುವ ನದಿ ತೀರದ ಗ್ರಾಮಗಳ ನಿವಾಸಿಗಳು, ರೈತರು ಹಾಗೂ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ನದಿಯ ನೀರಿನ ಹರಿವು ಏಕಾಏಕಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ.

ಜುಲೈ 18ರಂದು ಬೆಳಿಗ್ಗೆ 8 ಗಂಟೆಯ ವೇಳೆಗೆ ಆಲಮಟ್ಟಿ ಜಲಾಶಯದ ನೀರಿನ ಮಟ್ಟ 517.42 ಮೀಟರ್ ದಾಖಲಾಗಿದ್ದು, ಒಟ್ಟು ನೀರಿನ ಸಂಗ್ರಹ 89.800 ಟಿಎಂಸಿ ಹಾಗೂ ಜೀವಂತ ಸಂಗ್ರಹ 72.180 ಟಿಎಂಸಿ ಇದೆ. ಜಲಾಶಯಕ್ಕೆ ಪ್ರಸ್ತುತ 6,091 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಇದೇ ವೇಳೆ, ಟ್ಯಾಂಕ್ ಭರ್ತಿಗೆ 2,589 ಕ್ಯೂಸೆಕ್ ಹಾಗೂ ಕುಡಿಯುವ ನೀರು, ಆವಿಯಾಗುವಿಕೆ ಮತ್ತು ಬ್ಯಾಕ್‌ವಾಟರ್ ಅಗತ್ಯಗಳಿಗೆ 423 ಕ್ಯೂಸೆಕ್ ಸೇರಿದಂತೆ ಒಟ್ಟು 3,012 ಕ್ಯೂಸೆಕ್ ನೀರನ್ನು ಬಳಸಲಾಗುತ್ತಿದೆ.

ಕೃಷ್ಣಾ ನದಿಗೆ ನೀರು ಬಿಡುಗಡೆ ಪ್ರಾರಂಭವಾಗಿರುವುದರಿಂದ ಮುಂದಿನ ಕೆಲ ಗಂಟೆಗಳಲ್ಲಿ ನದಿಯ ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ನದಿ ಪಾತ್ರದಲ್ಲಿ ಯಾರೂ ಸಂಚರಿಸಬಾರದು, ನೀರಿನ ಸಮೀಪ ತೆರಳಬಾರದು ಹಾಗೂ ಜಾನುವಾರುಗಳನ್ನು ನದಿಗೆ ಇಳಿಸಬಾರದು ಎಂದು ಜಲಾಶಯ ಆಡಳಿತ ಮತ್ತು ಸಂಬಂಧಿತ ಅಧಿಕಾರಿಗಳು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...