ಹಳಿಯಾಳದಲ್ಲಿ ರೌಡಿಶೀಟರ್ ದಾಂದಲೆ ಪ್ರಕರಣಕ್ಕೆ ತಿರುವು — ಘಟನೆ ನಿರ್ವಹಣೆಯಲ್ಲಿ ಲೋಪ ಆರೋಪದಡಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಪುಡಿರೌಡಿ ಮಚ್ ಮಂಜ ನಡೆಸಿದ ದಾಂದಲೆ ಪ್ರಕರಣ ಇದೀಗ ಪೊಲೀಸ್ ಇಲಾಖೆಯೊಳಗೆ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆದ ಆರೋಪದ ನಡುವೆಯೂ ಆರಂಭದಲ್ಲಿ ಪ್ರಕರಣವನ್ನು ಲಘುವಾಗಿ ಪರಿಗಣಿಸಲಾಗಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಜಿಲ್ಲಾ ಪೊಲೀಸ್ ಇಲಾಖೆ ಖಡಕ್ ಕ್ರಮ ಕೈಗೊಂಡಿದೆ.
ಭಾನುವಾರ ಮಧ್ಯರಾತ್ರಿ ಹಳಿಯಾಳ ನಗರದ ಮೌರ್ಯ ಬಾರ್ ಮುಂಭಾಗ ಕುಡಿದ ಅಮಲಿನಲ್ಲಿ ಗಲಾಟೆ ನಡೆಸಿದ್ದ ಎನ್ನಲಾದ ರೌಡಿಶೀಟರ್ ಮಂಜ, ಸಾರ್ವಜನಿಕರ ಎದುರೇ ಪೊಲೀಸರೊಂದಿಗೆ ದುರ್ವರ್ತನೆ ತೋರಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪೊಲೀಸ್ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು.
ಘಟನೆಯ ನಂತರ ಸಣ್ಣ ಪ್ರಕರಣ ದಾಖಲಿಸಿ ಕೈತೊಳೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆದಿದ್ದರೂ ಗಂಭೀರ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕ ವಲಯ ಹಾಗೂ ಮಾಧ್ಯಮಗಳಲ್ಲಿ ತೀವ್ರ ಚರ್ಚೆ ಶುರುವಾಯಿತು.
ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಕ್ರಮಕ್ಕೆ ಮುಂದಾಗಿದ್ದಾರೆ. ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಪಿಎಸ್‌ಐ ಬಸವರಾಜ್ ಅವರನ್ನು ಅಮಾನತು ಮಾಡಲಾಗಿದ್ದು, ಎಂಟು ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಸಿಪಿಐ ವಿರುದ್ಧ ಇಲಾಖಾ ತನಿಖೆಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ.
ಪೊಲೀಸ್ ಇಲಾಖೆಯ ಈ ಕ್ರಮ ನಿರ್ಲಕ್ಷ್ಯ ತೋರಿದ ಸಿಬ್ಬಂದಿಗೆ ಎಚ್ಚರಿಕೆಯ ಸಂದೇಶವಾಗಿದೆ. ರೌಡಿಶೀಟರ್‌ಗಳ ಜೊತೆ ಕೆಲ ಪೊಲೀಸರ ಅತಿಯಾದ ಸಂಪರ್ಕ ಹಾಗೂ ಸಡಿಲ ನಿಲುವು ಇಲಾಖೆಯ ಗೌರವಕ್ಕೆ ಧಕ್ಕೆ ತರಬಹುದು ಎಂಬ ಚರ್ಚೆಯೂ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ.
ಈ ಪ್ರಕರಣದಿಂದಾಗಿ ಪೊಲೀಸ್ ಸಿಬ್ಬಂದಿಯ ಕರ್ತವ್ಯ ನಿರ್ವಹಣೆ, ರೌಡಿಶೀಟರ್‌ಗಳ ಮೇಲಿನ ನಿಗಾ ಹಾಗೂ ಕಾನೂನು ಜಾರಿ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.
Post a Comment