ಬೆಂಗಳೂರು: ಪೊಲೀಸ್ ಇಲಾಖೆಯ ವರ್ಗಾವಣೆಗಳಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಲು ರಾಜ್ಯ ಗೃಹ ಇಲಾಖೆ ಮಹತ್ವದ ಹೆಜ್ಜೆ ಇಡುವ ಚಿಂತನೆ ನಡೆಸಿದೆ. ಶಾಸಕರ ಶಿಫಾರಸು ಪತ್ರ, ರಾಜಕೀಯ ಪ್ರಭಾವದ ಆಧಾರದ ಮೇಲೆ ನಡೆಯುವ ವರ್ಗಾವಣೆ ಪದ್ಧತಿಗೆ ಬದಲಾಗಿ ಪಾರದರ್ಶಕ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದೆ ಎನ್ನಲಾಗಿದೆ.
ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ವರ್ಗಾವಣೆ ಮಾದರಿಯಲ್ಲೇ ಪೊಲೀಸ್ ಇಲಾಖೆಯಲ್ಲೂ ಅರ್ಹತೆ ಮತ್ತು ನಿಯಮಾಧಾರಿತ ವರ್ಗಾವಣೆ ವ್ಯವಸ್ಥೆ ತರಲು ಚಿಂತನೆ ನಡೆಯುತ್ತಿದೆ. ವಿಶೇಷವಾಗಿ PSI, PI ಹಾಗೂ DYSP/ACP ಮಟ್ಟದ ಅಧಿಕಾರಿಗಳ ವರ್ಗಾವಣೆಯಲ್ಲಿ ರಾಜಕೀಯ ಒತ್ತಡ, ಶಿಫಾರಸು ಪತ್ರ ಹಾಗೂ ಪ್ರಭಾವದ ಆರೋಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿದೆ ಎನ್ನಲಾಗುತ್ತಿದೆ.
ಈ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಹೊಸ ವ್ಯವಸ್ಥೆ ಜಾರಿಗೆ ಇರುವ ತಾಂತ್ರಿಕ ಸವಾಲುಗಳು, ಕಾನೂನು ಅಂಶಗಳು ಹಾಗೂ ಅನುಷ್ಠಾನದ ಸಾಧ್ಯತೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಪೊಲೀಸ್ ವರ್ಗಾವಣೆ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವ ಉದ್ದೇಶದಿಂದ ಸೇವಾ ಅವಧಿ, ಅರ್ಹತೆ, ಕಾರ್ಯಕ್ಷಮತೆ ಹಾಗೂ ಆಡಳಿತಾತ್ಮಕ ಅಗತ್ಯಗಳನ್ನು ಆಧಾರವಾಗಿಟ್ಟುಕೊಂಡು ಕೌನ್ಸೆಲಿಂಗ್ ವ್ಯವಸ್ಥೆ ರೂಪಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಬೆಂಗಳೂರು ಕಮಿಷನರೇಟ್ ಸೇರಿದಂತೆ ಕೆಲವು ವಲಯಗಳಲ್ಲಿ ಸಬ್ ಇನ್ಸ್‌ಪೆಕ್ಟರ್ ಹಾಗೂ ಕಾನ್‌ಸ್ಟೇಬಲ್‌ಗಳ ವರ್ಗಾವಣೆಗೆ ಕೌನ್ಸೆಲಿಂಗ್ ಮಾದರಿ ಅನುಸರಿಸಲಾಗುತ್ತಿದೆ. ಇದೇ ಮಾದರಿಯನ್ನು ರಾಜ್ಯ ಮಟ್ಟದಲ್ಲಿ ವಿಸ್ತರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
2011ರ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಚನೆಯಾದ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್ (PEB) ವ್ಯವಸ್ಥೆ ಇದ್ದರೂ, ವರ್ಗಾವಣೆಯಲ್ಲಿ ರಾಜಕೀಯ ಒತ್ತಡ ಸಂಪೂರ್ಣವಾಗಿ ಕಡಿಮೆಯಾಗಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಪಾರದರ್ಶಕ ವ್ಯವಸ್ಥೆ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆದರೆ ತಮ್ಮ ಕ್ಷೇತ್ರದಲ್ಲಿ ತಮಗೆ ಅನುಕೂಲವಾಗುವ ಅಧಿಕಾರಿಗಳನ್ನು ನೇಮಿಸಿಕೊಳ್ಳುವುದು ರಾಜಕೀಯ ಪ್ರಭಾವದ ಭಾಗ ಎಂದು ಭಾವಿಸುವ ಕೆಲವು ಜನಪ್ರತಿನಿಧಿಗಳಿಂದ ಹೊಸ ನೀತಿಗೆ ವಿರೋಧ ವ್ಯಕ್ತವಾಗಬಹುದೇ ಎಂಬ ಪ್ರಶ್ನೆಯೂ ಮೂಡಿದೆ.
ಒಟ್ಟಿನಲ್ಲಿ ಪೊಲೀಸ್ ಇಲಾಖೆಯಲ್ಲಿ ‘ಮಿನಿಟ್ ಪೊಲೀಸ್’ ವ್ಯವಸ್ಥೆಗೆ ಅಂತ್ಯ ಹಾಡಿ, ಮೆರಿಟ್ ಆಧಾರಿತ ವರ್ಗಾವಣೆ ಪದ್ಧತಿ ಜಾರಿಯಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
Post a Comment