ಆದೇಶ ಬಂದರೂ ಖಾತೆ ಮಾಡಿಕೊಡದ ಅಧಿಕಾರಿಗಳ ವಿರುದ್ಧ ಶ್ರೀ ವೆಂಕಟೇಶ್ವರ ಮೂರ್ತಿ ಆಕ್ರೋಶ
ಗುಡಿಬಂಡೆ: ಜಮೀನು ವಿವಾದದಲ್ಲಿ ತಮ್ಮ ಪರವಾಗಿ ಆದೇಶ ಬಂದಿದ್ದರೂ ಜಮೀನು ಖಾತೆ ಮಾಡಿಕೊಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಶ್ರೀ ವೆಂಕಟೇಶ್ವರ ಮೂರ್ತಿ ಅವರು ತಹಶೀಲ್ದಾರ್ ಕಚೇರಿ ಎದುರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಜಮೀನು ಖಾತೆ ಮಾಡಿಕೊಡುವಂತೆ ತಹಶೀಲ್ದಾರ್ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಅರ್ಜಿ ಸಲ್ಲಿಸಿ ಒಂದು ವರ್ಷ ಪೂರ್ಣಗೊಂಡಿರುವುದನ್ನು ಸೂಚಿಸುವಂತೆ ಕಚೇರಿ ಎದುರೇ ಕೇಕ್ ಕತ್ತರಿಸಿ ಅಧಿಕಾರಿಗಳ ವಿಳಂಬ ಧೋರಣೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
“ನ್ಯಾಯಯುತವಾಗಿ ಆದೇಶ ಬಂದಿದ್ದರೂ ಖಾತೆ ಪ್ರಕ್ರಿಯೆ ಪೂರ್ಣಗೊಳಿಸದೆ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ. ಹಲವು ಬಾರಿ ಮನವಿ ಮಾಡಿದರೂ ಪರಿಹಾರ ಸಿಕ್ಕಿಲ್ಲ” ಎಂದು ಶ್ರೀ ವೆಂಕಟೇಶ್ವರ ಮೂರ್ತಿ ಬೇಸರ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ಮೂರು ವಾರಗಳ ಒಳಗಾಗಿ ಜಮೀನು ಖಾತೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸಾರ್ವಜನಿಕರ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗಬೇಕು. ಸರ್ಕಾರಿ ಕಚೇರಿಗಳಲ್ಲಿ ಜನರು ತಮ್ಮ ಹಕ್ಕಿನ ಕೆಲಸಗಳಿಗಾಗಿ ವರ್ಷಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಅವರು ಆಗ್ರಹಿಸಿದರು.
ವರದಿ: ನ್ಯೂ ವಿಜಯ ನ್ಯೂಸ್
ಸತ್ಯ....ನೇರ....ನಿರಂತರ
Post a Comment