ಹುಬ್ಬಳ್ಳಿ ಚಿಟಗುಬ್ಬಿ ಆಸ್ಪತ್ರೆ ಎದುರಿನ ಉದ್ಯಾನವನ ಕುಡುಕರ ಹಾಟ್‌ಸ್ಪಾಟ್! ಸಾರ್ವಜನಿಕರಿಂದ ಆಕ್ರೋಶ
ಹುಬ್ಬಳ್ಳಿ: ನಗರದ ಚಿಟಗುಬ್ಬಿ ಆಸ್ಪತ್ರೆ ಎದುರಿನ ಸಾರ್ವಜನಿಕ ಉದ್ಯಾನವನವು ಇತ್ತೀಚಿನ ದಿನಗಳಲ್ಲಿ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.
ಜನರು ವಿಶ್ರಾಂತಿ ಪಡೆಯಲು, ಹಿರಿಯ ನಾಗರಿಕರು ವಾಯುವಿಹಾರ ಮಾಡಲು ಹಾಗೂ ಮಕ್ಕಳು ಆಟವಾಡಲು ನಿರ್ಮಿಸಲಾದ ಈ ಉದ್ಯಾನವನದಲ್ಲಿ ಮದ್ಯ ಸೇವನೆ ಮಾಡುವವರ ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉದ್ಯಾನವನದ ವಿವಿಧೆಡೆ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಗ್ಲಾಸ್‌ಗಳು ಹಾಗೂ ತ್ಯಾಜ್ಯ ಬಿದ್ದಿರುವುದರಿಂದ ಸ್ವಚ್ಛತೆ ಹಾಳಾಗಿದ್ದು, ಕುಟುಂಬ ಸಮೇತ ಬರುವ ಜನರು ಮುಜುಗರ ಅನುಭವಿಸುವಂತಾಗಿದೆ. ವಿಶೇಷವಾಗಿ ಸಂಜೆ ಸಮಯದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂಬುದು ಸ್ಥಳೀಯರ ದೂರಾಗಿದೆ.
“ಸಾರ್ವಜನಿಕರ ಅನುಕೂಲಕ್ಕಾಗಿ ಇರುವ ಉದ್ಯಾನವನ ಸುರಕ್ಷಿತವಾಗಿರಬೇಕು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಉದ್ಯಾನವನದ ಸ್ವಚ್ಛತೆ ಮತ್ತು ಭದ್ರತೆ ಕಡೆ ಗಮನ ನೀಡಿ, ಮದ್ಯ ಸೇವನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವರದಿ: ನ್ಯೂ ವಿಜಯ ನ್ಯೂಸ್
ಸತ್ಯ....ನೇರ.... ನಿರಂತರ
Post a Comment