ಹುಬ್ಬಳ್ಳಿ: ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಮಹಾರಾಜ ಟ್ರೋಫಿ ಟಿ-20 ಟೂರ್ನಿಗೆ ಹುಬ್ಬಳ್ಳಿ ನಗರ ಸಜ್ಜಾಗುತ್ತಿದೆ. ಜೂನ್ 27ರಿಂದ ಆರಂಭವಾಗಲಿರುವ ಟೂರ್ನಿಯ ಹಿನ್ನೆಲೆಯಲ್ಲಿ ಕೆಎಸ್‌ಸಿಎ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಟೀಮ್ ಇಂಡಿಯಾದ ಮಾಜಿ ವೇಗಿ ವೆಂಕಟೇಶ ಪ್ರಸಾದ್ ಅವರು ಹುಬ್ಬಳ್ಳಿಯ ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಮೈದಾನದ ಪಿಚ್, ಔಟ್‌ಫೀಲ್ಡ್, ಆಟಗಾರರಿಗೆ ಕಲ್ಪಿಸಲಾಗಿರುವ ಸೌಲಭ್ಯಗಳು, ಪ್ರೇಕ್ಷಕರ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಲು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಮಹಾರಾಜ ಟ್ರೋಫಿಯಂತಹ ಪ್ರಮುಖ ಟಿ-20 ಟೂರ್ನಿಗೆ ಹುಬ್ಬಳ್ಳಿ ಆತಿಥ್ಯ ವಹಿಸುತ್ತಿರುವುದು ಈ ಭಾಗದ ಕ್ರಿಕೆಟ್ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ. ಉತ್ತಮ ಗುಣಮಟ್ಟದ ಪಂದ್ಯಾವಳಿ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೆಎಸ್‌ಸಿಎ ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ವೀರಣ್ಣ ಸವಡಿ, ಚೇರ್ಮನ್ ಅಲ್ತಾಫ್ ಕಿತ್ತೂರ ಹಾಗೂ ಕೆಎಸ್‌ಸಿಎ ಧಾರವಾಡ ವಲಯದ ಉಸ್ತುವಾರಿ ವಿಜಯ ವೈದ್ಯ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಒಟ್ಟಿನಲ್ಲಿ ಕ್ರಿಕೆಟ್ ಹಬ್ಬಕ್ಕೆ ಹುಬ್ಬಳ್ಳಿ ಸಜ್ಜಾಗಿದ್ದು, ಮೈದಾನದಲ್ಲಿ ರೋಚಕ ಪಂದ್ಯಗಳ ಸಂಭ್ರಮಕ್ಕಾಗಿ ಕ್ರೀಡಾಭಿಮಾನಿಗಳ ನಿರೀಕ್ಷೆ ಗರಿಗೆದರಿದೆ.
Post a Comment