ತಿರುವನಂತಪುರಂ: ಕೇರಳದ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ. ಮಹಾನಗರ ಪಾಲಿಕೆಯ 20 ಬಿಜೆಪಿ ಕೌನ್ಸಿಲರ್‌ಗಳು ಸ್ವೀಕರಿಸಿದ್ದ ಪ್ರಮಾಣ ವಚನವನ್ನು ಕೇರಳ ಹೈಕೋರ್ಟ್ ಅಸಿಂಧುಗೊಳಿಸಿ ಮಹತ್ವದ ಆದೇಶ ನೀಡಿದೆ.
ನಿಯಮಾನುಸಾರ ನಿಗದಿಪಡಿಸಿದ ರೀತಿಯಲ್ಲಿ ಪ್ರಮಾಣ ವಚನ ಸ್ವೀಕರಿಸದೇ, ದೇವತೆಗಳು, ಗುರುಗಳು ಹಾಗೂ ಹುತಾತ್ಮರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಕಾನೂನು ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅವರು, ನಿಯಮ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಸಂಬಂಧಪಟ್ಟ 20 ಕೌನ್ಸಿಲರ್‌ಗಳು ನಾಲ್ಕು ವಾರಗಳ ಒಳಗಾಗಿ ಕಾನೂನುಬದ್ಧವಾಗಿ ಮರು ಪ್ರಮಾಣ ವಚನ ಸ್ವೀಕರಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಸಿಪಿಎಂ ಕೌನ್ಸಿಲರ್ ಅರ್ಜಿಯಿಂದ ಪ್ರಕರಣ ಬೆಳಕಿಗೆ
ಬಿಜೆಪಿ ಕೌನ್ಸಿಲರ್‌ಗಳ ಪ್ರಮಾಣ ವಚನ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಿಪಿಎಂ ಕೌನ್ಸಿಲರ್ ಎಸ್.ಪಿ. ದೀಪಕ್ ಹೈಕೋರ್ಟ್ ಮೊರೆ ಹೋಗಿದ್ದರು. ಕೌನ್ಸಿಲರ್‌ಗಳು ಕೇರಳ ಪುರಸಭೆ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ಅರ್ಜಿದಾರರ ಪ್ರಕಾರ, ಕೆಲವು ಸದಸ್ಯರು ಭಗವಾನ್ ಅಯ್ಯಪ್ಪ, ಅಟ್ಟುಕಾಲಮ್ಮ, ಭಾರತಾಂಬೆ, ಶ್ರೀ ಪದ್ಮನಾಭನ್, ಗುರುದೇವನ್ ಹಾಗೂ ಹುತಾತ್ಮರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಕಾನೂನಿನಲ್ಲಿ ನಿಗದಿಪಡಿಸಿದ ಮಾದರಿಯ ಹೊರತಾಗಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶವಿಲ್ಲ ಎಂದು ವಾದಿಸಲಾಗಿತ್ತು.
ನ್ಯಾಯಾಲಯ ಹೇಳಿದ್ದೇನು?
ವಿಚಾರಣೆಯ ವೇಳೆ ನ್ಯಾಯಾಲಯ, "ಜನರ ಧಾರ್ಮಿಕ ನಂಬಿಕೆಗಳು ಹಾಗೂ ದೇವರ ಬಗ್ಗೆ ಇರುವ ದೃಷ್ಟಿಕೋನಗಳು ವಿಭಿನ್ನವಾಗಿರಬಹುದು. ಆದರೆ ಜನಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕರಿಸುವಾಗ ಕಾನೂನಿನ ನಿಯಮಗಳನ್ನು ಪಾಲಿಸುವುದು ಅಗತ್ಯ" ಎಂದು ಅಭಿಪ್ರಾಯಪಟ್ಟಿತು.
ಎಲ್ಲಾ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ಹೈಕೋರ್ಟ್ 20 ಬಿಜೆಪಿ ಕೌನ್ಸಿಲರ್‌ಗಳ ಪ್ರಮಾಣ ವಚನವನ್ನು ಅಮಾನ್ಯಗೊಳಿಸಿ, ನಿಗದಿತ ಅವಧಿಯಲ್ಲಿ ಮರು ಪ್ರಮಾಣ ವಚನ ಸ್ವೀಕರಿಸಲು ಸೂಚಿಸಿದೆ.
ಈ ಆದೇಶವು ತಿರುವನಂತಪುರಂ ಮಹಾನಗರ ಪಾಲಿಕೆ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
Post a Comment