⚡ಟ್ರೆಂಡಿಂಗ್

ಸರ್ಕಾರದ ಸಂಬಳ ಇದ್ದರೂ ಲಂಚಕ್ಕೆ ಕೈ ಚಾಚಿದ ಎಎಸ್‌ಐ..! ಠಾಣೆಯಲ್ಲೇ ₹10 ಸಾವಿರ ಪಡೆಯುವಾಗ ಲೋಕಾಯುಕ್ತ ಬಲೆಗೆ

ಮಂಡ್ಯ: ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಆರೋಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಸಹಾಯಕ ಸಬ್‌ಇನ್‌ಸ್ಪೆಕ್ಟರ್ (ಎಎಸ್‌ಐ) ಶಿವಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಬೀಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಗಲಾಟೆ ಪ್ರಕರಣವೊಂದರಲ್ಲಿ ಹೆಸರು ಕೇಳಿಬಂದಿದ್ದ ರಾಜೇಗೌಡ ಎಂಬುವವರಿಗೆ ‘ಸ್ಟೇಷನ್ ಬೇಲ್’ ಮಾಡಿಸಿಕೊಡುವುದಾಗಿ ಹೇಳಿ ಎಎಸ್‌ಐ ಶಿವಕುಮಾರ್ ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.

ಎಎಸ್‌ಐ ಜೊತೆ ನಡೆದ ಮಾತುಕತೆಯನ್ನು ರಾಜೇಗೌಡ ಅವರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಸಾಕ್ಷ್ಯಗಳೊಂದಿಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಬುಧವಾರ ರಾತ್ರಿ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲೇ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಎಎಸ್‌ಐ ಶಿವಕುಮಾರ್ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಲೋಕಾಯುಕ್ತ ಎಸ್ಪಿ ಎಸ್. ಸುರೇಶಬಾಬು ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುನಿಲ್ ಕುಮಾರ್, ಇನ್‌ಸ್ಪೆಕ್ಟರ್ ಲೇಪಾಕ್ಷಮೂರ್ತಿ, ಬ್ಯಾಟರಾಯಗೌಡ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಾನೂನು ಕಾಪಾಡಬೇಕಾದ ಪೊಲೀಸ್ ಠಾಣೆಯಲ್ಲೇ ಲಂಚದ ಆರೋಪ ಕೇಳಿಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. “ಸರ್ಕಾರದ ಸಂಬಳ ಇದ್ದರೂ ಲಂಚಕ್ಕೆ ಕೈ ಚಾಚುವುದು ಎಷ್ಟು ಸರಿ?” ಎಂಬ ಪ್ರಶ್ನೆ ಜನರಿಂದ ಕೇಳಿಬರುತ್ತಿದೆ.

ಇದೇ ವೇಳೆ, “ಲೋಕಾಯುಕ್ತ ಅಧಿಕಾರಿಗಳು ಹುಬ್ಬಳ್ಳಿ–ಧಾರವಾಡ ಭಾಗದಲ್ಲಿಯೂ ಭ್ರಷ್ಟಾಚಾರದ ವಿರುದ್ಧ ಹೆಚ್ಚಿನ ನಿಗಾ ವಹಿಸಲಿ” ಎಂಬ ಅಭಿಪ್ರಾಯವೂ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.

– ನ್ಯೂ ವಿಜಯ ನ್ಯೂಸ್ :::

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...