⚡ಟ್ರೆಂಡಿಂಗ್

ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಖಚಿತ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ಬೆಂಗಳೂರು: ರಾಜ್ಯದ ನೂತನ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.

ಸಭೆಯಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ, ಬೆಂಗಳೂರು ನಗರದ ಅಪರಾಧ ಪ್ರಕರಣಗಳು, ಸಂಚಾರ ದಟ್ಟಣೆ, ಡ್ರಗ್ಸ್ ಮಾಫಿಯಾ, ಮಹಿಳೆಯರ ಸುರಕ್ಷತೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಸುದೀರ್ಘ ಚರ್ಚೆ ನಡೆಸಿದರು.

ಸಭೆಯ ನಂತರ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, “ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷದ ಒತ್ತಡಕ್ಕೆ ಮಣಿಯದೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ಕಾನೂನು ಎಲ್ಲರಿಗೂ ಒಂದೇ. ಯಾರೇ ಆಗಲಿ ಕಾನೂನಿನ ಚೌಕಟ್ಟನ್ನು ಮೀರಿ ವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಮಹಿಳೆಯರ ಸುರಕ್ಷತೆ ಕುರಿತು ಮಾತನಾಡಿದ ಅವರು, “ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಮಹಿಳೆಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ, ಅವರ ಉಡುಪು ಅಥವಾ ವೈಯಕ್ತಿಕ ಆಯ್ಕೆಗಳ ಬಗ್ಗೆ ಟೀಕೆ ಮಾಡುವ ಮನೋಭಾವಕ್ಕೆ ಅವಕಾಶ ನೀಡಬಾರದು. ಮಹಿಳೆಯರ ಮೇಲೆ ದಾಳಿ ನಡೆದರೆ ಪೊಲೀಸರು ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಸೂಚಿಸಿದರು.

“ಪಕ್ಷ ನನಗೆ ದೊಡ್ಡ ಜವಾಬ್ದಾರಿ ನೀಡಿದೆ. ಇಲಾಖೆಯ ಕಾರ್ಯವೈಖರಿ ಕುರಿತು ಸಂಪೂರ್ಣ ಮಾಹಿತಿ ಪಡೆಯುತ್ತಿದ್ದೇನೆ. ಮಾಜಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಅವಧಿಯಲ್ಲಿ ಆರಂಭವಾದ ಜನಪರ ಯೋಜನೆಗಳನ್ನು ಮುಂದುವರಿಸುವ ಕುರಿತು ಅಧಿಕಾರಿಗಳಿಂದ ವಿವರ ಪಡೆದಿದ್ದೇನೆ” ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿ ಹಾಗೂ ದ್ವೇಷ ಹುಟ್ಟಿಸುವ ಹೇಳಿಕೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಈ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇರಿಸಲಾಗುತ್ತಿದೆ ಎಂದು ತಿಳಿಸಿದರು.

ರೌಡಿಸಂ ನಿಯಂತ್ರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಈ ಕುರಿತು ಈಗಲೇ ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ರೌಡಿ ಚಟುವಟಿಕೆಗಳನ್ನು ತಡೆಯಲು ಈಗಾಗಲೇ ಬ್ಲೂ ಪ್ರಿಂಟ್ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುವುದು” ಎಂದರು.

ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಜನರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...