ಬೆಂಗಳೂರು ಘನ ತ್ಯಾಜ್ಯ ಟೆಂಡರ್‌ನಲ್ಲಿ ಭಾರೀ ಅಕ್ರಮ ಆರೋಪ: CBI ಅಥವಾ ಲೋಕಾಯುಕ್ತ ತನಿಖೆಗೆ ಶೋಭಾ ಕರಂದ್ಲಾಜೆ ಆಗ್ರಹ
ಬೆಂಗಳೂರು, ಮೇ 30: ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆಯ (Solid Waste Management) ಟೆಂಡರ್ ಪ್ರಕ್ರಿಯೆಯಲ್ಲಿ ಗಂಭೀರ ಸ್ವರೂಪದ ಅಕ್ರಮಗಳು ಹಾಗೂ ಪಾರದರ್ಶಕತೆಯ ಉಲ್ಲಂಘನೆ ನಡೆದಿರುವ ಆರೋಪ ಕೇಳಿಬಂದಿದೆ. ಈ ಕುರಿತು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಘನ ತ್ಯಾಜ್ಯ ನಿರ್ವಹಣೆಯ ಯೋಜನಾ ವೆಚ್ಚವನ್ನು ಬರೋಬ್ಬರಿ ₹39,437 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಹಣಕಾಸು ಇಲಾಖೆಯ ಆಕ್ಷೇಪಣೆಗಳಿದ್ದರೂ ಟೆಂಡರ್‌ಗೆ ಅನುಮೋದನೆ ನೀಡಿರುವುದು ಹಾಗೂ ಮೊದಲ ಮತ್ತು ಎರಡನೇ ಹಂತದಲ್ಲಿ ಅನರ್ಹಗೊಂಡಿದ್ದ ಕೆಲವು ಸಂಸ್ಥೆಗಳನ್ನು ಮೂರನೇ ಹಂತದಲ್ಲಿ ಅರ್ಹರೆಂದು ಪರಿಗಣಿಸಿರುವುದು ಟೆಂಡರ್ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಬರೆದಿರುವ ಪತ್ರದಲ್ಲಿ, ಟೆಂಡರ್‌ಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು. ಜೊತೆಗೆ, ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಹೊಣೆಗಾರಿಕೆಯನ್ನು ನಿಗದಿಪಡಿಸಿ, ಸ್ವತಂತ್ರ ತನಿಖೆಗಾಗಿ CBI ಅಥವಾ ಕರ್ನಾಟಕ ಲೋಕಾಯುಕ್ತಕ್ಕೆ ಪ್ರಕರಣವನ್ನು ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
“ಕರ್ನಾಟಕದ ಅಭಿವೃದ್ಧಿಯ ಪ್ರತಿಯೊಂದು ಮಹತ್ವದ ಯೋಜನೆಯಲ್ಲೂ ಕಾಂಗ್ರೆಸ್ ಸರ್ಕಾರ ಒಪ್ಪಂದಗಳ ರಾಜಕಾರಣ ನಡೆಸುತ್ತಿರುವ ಅನುಮಾನಗಳು ಮೂಡುತ್ತಿವೆ. ರಸ್ತೆ, ಮೂಲಸೌಕರ್ಯ, ಭೂಸ್ವಾಧೀನದ ಬಳಿಕ ಇದೀಗ ಘನ ತ್ಯಾಜ್ಯ ನಿರ್ವಹಣೆಯಲ್ಲೂ ಅಕ್ರಮಗಳ ವಾಸನೆ ಬರುತ್ತಿದೆ” ಎಂದು ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.
ಈ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸ್ವತಂತ್ರ ತನಿಖೆ ನಡೆಸಿ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಮುಖ ಆರೋಪಗಳು:
- ಘನ ತ್ಯಾಜ್ಯ ನಿರ್ವಹಣಾ ಯೋಜನಾ ವೆಚ್ಚ ₹39,437 ಕೋಟಿಗೆ ಏರಿಕೆ.
- ಹಣಕಾಸು ಇಲಾಖೆಯ ಆಕ್ಷೇಪಣೆಗಳ ನಡುವೆಯೂ ಟೆಂಡರ್‌ಗೆ ಅನುಮೋದನೆ.
- ಹಿಂದಿನ ಹಂತಗಳಲ್ಲಿ ಅನರ್ಹಗೊಂಡ ಸಂಸ್ಥೆಗಳಿಗೆ ಮೂರನೇ ಹಂತದಲ್ಲಿ ಅವಕಾಶ.
- ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ.
- CBI ಅಥವಾ ಲೋಕಾಯುಕ್ತ ತನಿಖೆಗೆ ಒತ್ತಾಯ.
ನ್ಯೂ ವಿಜಯ ನ್ಯೂಸ್
إرسال تعليق