ಜೂನ್ 3ರಂದು ಸರಳ ಪ್ರಮಾಣ ವಚನ ಸಮಾರಂಭ: ಕಾರ್ಯಕರ್ತರಿಗೆ ಬೆಂಗಳೂರಿಗೆ ಬಾರದಂತೆ ಕಾಂಗ್ರೆಸ್ ಮನವಿ
ಬೆಂಗಳೂರು: ಜೂನ್ 3ರಂದು ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮವನ್ನು ಅತ್ಯಂತ ಸರಳ ಹಾಗೂ ಸಾಂದರ್ಭಿಕವಾಗಿ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಜನಸಾಮಾನ್ಯರಿಗೆ ಯಾವುದೇ ತೊಂದರೆ ಉಂಟಾಗದಂತೆ ಹಾಗೂ ಬೆಂಗಳೂರಿನ ನಾಗರಿಕರ ದೈನಂದಿನ ಚಟುವಟಿಕೆಗಳಿಗೆ ಅಡಚಣೆಯಾಗದಂತೆ ಕಾರ್ಯಕ್ರಮವನ್ನು ಸೀಮಿತ ಮಟ್ಟದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅನಗತ್ಯವಾಗಿ ಪ್ರಯಾಣ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಹಾಗೂ ಸಾರ್ವಜನಿಕರು ಬೆಂಗಳೂರಿಗೆ ಆಗಮಿಸದೆ ತಮ್ಮ ಶುಭಾಶಯಗಳು ಮತ್ತು ಆಶೀರ್ವಾದಗಳನ್ನು ದೂರದಿಂದಲೇ ನೀಡುವಂತೆ ಕೆಪಿಸಿಸಿ ಮನವಿ ಮಾಡಿದೆ.
ಮುಂದಿನ ದಿನಗಳಲ್ಲಿ ನೂತನ ಮುಖ್ಯಮಂತ್ರಿಗಳು ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಜನರನ್ನು ನೇರವಾಗಿ ಭೇಟಿ ಮಾಡಿ ಅವರ ಆಶೀರ್ವಾದ ಪಡೆಯಲಿದ್ದಾರೆ ಎಂದು ತಿಳಿಸಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್, ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಸಹಕರಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಬೇಕು ಎಂದು ವಿನಂತಿಸಿದ್ದಾರೆ.
Post a Comment